JNANASELE |
ಇತ್ತೀಚೆಗೆ ಎಲ್ಲ ವಿಷಯಗಳಿಗೂ ಆನ್ಲೈನ್ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಸ್ತುಗಳ ಖರೀದಿ, ಹೋಟೆಲ್, ಪ್ರವಾಸ ಸ್ಥಳಗಳ ಹುಡುಕಾಟ… ಹೀಗೆ ಎಲ್ಲದಕ್ಕೂ ಆನ್ಲೈನ್ನಲ್ಲಿ ದೊರೆಯುವ ಮಾಹಿತಿಗಳನ್ನು ಅವಲಂಬಿಸುತ್ತೇವೆ. ಅದರ ಜೊತೆಗೆ ಅಲ್ಲಿರುವ ರಿವ್ಯೂ, ಕಾಮೆಂಟ್ಗಳತ್ತಲೂ ನಮ್ಮ ಕಣ್ಣು ಹೊರಳುತ್ತದೆ. ಆದರೆ ಆ ಮಾಹಿತಿಗಳು ಅದೆಷ್ಟು ಸತ್ಯ? ಆ ರಿವ್ಯೂಗಳನ್ನು ಎಷ್ಟರಮಟ್ಟಿಗೆ ನಂಬಬಹುದು?
ನಾವು ಭಾರತೀಯರು, ಎಲ್ಲವನ್ನೂ ಅಳೆದು ಸುರಿದು ಮಾಡುವವರು. ಯಾವುದೇ ಕೆಲಸಕ್ಕೆ ಮುಂಚೆ ಹತ್ತಾರು ಕಡೆ ವಿಚಾರಿಸಿಯೇ ಮುಂದುವರಿಯುವವರು. ವಸ್ತುಗಳನ್ನು ಖರೀದಿಸುವುದಿರಲಿ, ಪ್ರವಾಸಕ್ಕೆ ಹೋಗುವುದಿರಲಿ, ಹೋಟೆಲ್ನ ರುಚಿ ಸವಿಯುವುದಿರಲಿ, ಇನ್ನೊಬ್ಬರನ್ನು ಕೇಳಿ, ಅವರ ಅಭಿಪ್ರಾಯ ಪಡೆದು ಆನಂತರ ಮುಂದಡಿಯಿಡುತ್ತೇವೆ. ಈಗ ಆನ್ಲೈನ್ನಲ್ಲಿಯೇ ನಮ್ಮ ಬಹುತೇಕ ವ್ಯವಹಾರಗಳು ನಡೆಯುವುದರಿಂದ ಅಲ್ಲಿರುವ ವಿಮರ್ಶೆಗಳತ್ತಲೂ ಕಣ್ಣು ಹಾಯಿಸುವುದು ಸಹಜ. ಆದರೆ ಇವು ಎಷ್ಟರಮಟ್ಟಿಗೆ ವಿಶ್ವಾಸಾರ್ಹ ಎಂಬುದು ನಮ್ಮ ಮುಂದಿನ ಪ್ರಶ್ನೆ. ಅವುಗಳ ವಿಶ್ವಾಸಾರ್ಹತೆ ಪರೀಕ್ಷಿಸಲು ಇಲ್ಲಿವೆ ಕೆಲವು ಟಿಪ್ಸ್.
ಬರವಣಿಗೆ ಹೇಗಿದೆ?
ವಸ್ತು/ಸೇವೆಯ ಬಗ್ಗೆ ಗ್ರಾಹಕರ ಕಾಮೆಂಟ್ ಏನಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ, ಅದರಲ್ಲೂ ಬರವಣಿಗೆಯ ಶೈಲಿಯನ್ನು ಅರ್ಥ ಮಾಡಿಕೊಳ್ಳಿ. ಆ ವಸ್ತು ಅಥವಾ ಸೇವೆಯನ್ನು ಸಿಕ್ಕಾಪಟ್ಟೆ ಹೊಗಳಿ ಬರೆದಿರುವ ಅಥವಾ ಅತಿ ಕೆಟ್ಟದಾಗಿ ಬೈದಿರುವ ವಿಮರ್ಶೆಗಳನ್ನು ನಂಬದಿರುವುದೇ ಉತ್ತಮ. ಹೋಟೆಲ್ಗಳ ಬಗ್ಗೆ ‘ಇಂತಹ ಉತ್ತಮ ಹೋಟೆಲ್ ಜಗತ್ತಿನಲ್ಲೇ ಇಲ್ಲ’, ‘ಉತ್ತಮದಲ್ಲಿ ಉತ್ತಮ ಸೇವೆ ಇಲ್ಲಿ ಲಭ್ಯ’, ಇಂತಹ ಅತಿರಂಜಿತ ಹೇಳಿಕೆಗಳಿದ್ದರೆ ಅವುಗಳನ್ನು ನಂಬದಿರುವುದೇ ಲೇಸು. ಹಾಗೆಯೇ ಇನ್ನೊಂದು ಅಂಶವನ್ನು ಇಲ್ಲಿ ಗಮನಿಸಬೇಕು. ವಸ್ತು ಅಥವಾ ಸೇವೆಯ ಬಗ್ಗೆ ವಿವರವಾಗಿ ತಿಳಿಸದಿದ್ದಲ್ಲಿಯೂ ಅದನ್ನು ನಕಲಿ ಕಾಮೆಂಟ್ ಎಂದು ಪರಿಗಣಿಸಬಹುದು. ಹೋಟೆಲ್ ಉದಾಹರಣೆಯನ್ನೇ ತೆಗೆದುಕೊಂಡರೆ ಬಾಥ್ರೂಂ, ವಾರ್ಡ್ರೋಬ್ ಅಥವಾ ಹಾಸಿಗೆ ಬಗ್ಗೆ ತಿಳಿಸದೇ ಸುಮ್ಮನೆ ‘ಉತ್ತಮ ಹೋಟೆಲ್, ಅತ್ಯುತ್ತಮ ಸೇವೆ’ ಅಂದರೆ ಅದರಲ್ಲೇನೋ ಗೋಲ್‍ಮಾಲ್ ಇದೆ ಅಂತಲೇ ಅರ್ಥ. ಅದರ ಬದಲಾಗಿ ತಾವು ಯಾವಾಗ ಹೋಗಿದ್ದೆವು, ಎಷ್ಟು ಬಾಡಿಗೆ ನೀಡಿದ್ದೆವು, ಅಲ್ಲಿನ ನೌಕರರು ಹೇಗೆ ವರ್ತಿಸಿದರು ಎಂಬುದನ್ನೆಲ್ಲ ವಿವರವಾಗಿ ಬರೆದಿದ್ದರೆ ಅದನ್ನು ನಂಬಬಹುದು. ವಿಮರ್ಶೆಯಲ್ಲಿ ಕೇವಲ ಒಂದೇ ಶಬ್ದವಿದ್ದರೆ ಅಥವಾ ಅತೀ ದೀರ್ಘವಾಗಿದ್ದರೆ ಅದನ್ನು ನಂಬುವುದು ಸೂಕ್ತವಲ್ಲ. ಸಾಮಾನ್ಯವಾಗಿ ನಿಜವಾದ ರಿವ್ಯೂಗಳು 4ರಿಂದ 5 ಸಾಲು ಹೊಂದಿರುತ್ತವೆ.
ಬ್ರೋಷರ್ನಂತಿದ್ದರೆ ನಂಬಬೇಡಿ
ವಿಮರ್ಶೆಯು ಆ ವಸ್ತು/ಸೇವೆಯ ಮಾಹಿತಿ ಕೈಪಿಡಿ (ಮ್ಯಾನ್ಯುಅಲ್)ಯಂತಿದ್ದರೆ ಸ್ವಲ್ಪ ಎಚ್ಚರವಹಿಸಿ. ಯಾವುದೋ ಹೊಸ ಮೊಬೈಲ್ ಮಾರುಕಟ್ಟೆಗೆ ಬಂದಿದೆ ಎಂದಿಟ್ಟುಕೊಳ್ಳಿ. ಅದರ ಖರೀದಿಗೂ ಮುನ್ನ ಒಮ್ಮೆ ಉಳಿದ ಗ್ರಾಹಕರ ಅನುಭವ ತಿಳಿದುಕೊಳ್ಳಲು ಕಾಮೆಂಟ್ಗಳತ್ತ ಕಣ್ಣಾಡಿಸುತ್ತೀರಿ. ಅದರಲ್ಲಿ ತಾಂತ್ರಿಕ ಮಾಹಿತಿಗಳು ಸಾಕಷ್ಟಿದ್ದರೆ, ಆ ಮೊಬೈಲ್ನ ಮಾಡೆಲ್ ನಂಬರ್ನಿಂದ ಹಿಡಿದು ಐಸಿ ಚಿಪ್ನವರೆಗೆ ಬರೀ ತಾಂತ್ರಿಕ ವಿಷಯಗಳೇ ತುಂಬಿದ್ದರೆ ಅಥವಾ ಆ ಮಾಹಿತಿ ಆ ವಸ್ತುವಿನ ಬ್ರೋಷರ್ನಂತೆ ಕಾಣಿಸುತ್ತಿದ್ದರೆ ಅದನ್ನು ನಂಬದಿರುವುದೇ ಒಳ್ಳೆಯದು. ಯಾಕೆಂದರೆ ನಿಜವಾಗಿ ಆ ವಸ್ತುವನ್ನು ಬಳಸಿದವರು ಆ ಬಗೆಯ ಮಾಹಿತಿಗಳನ್ನೆಲ್ಲ ನೀಡುವುದಿಲ್ಲ.
ವಿಮರ್ಶೆಯಲ್ಲಿ ಭಾವನೆಗಳಿವೆಯೆ?
ಅತಿಯಾದ ಆವೇಶ, ಸಂತೋಷ, ಸಿಟ್ಟು ಇತ್ಯಾದಿಗಳನ್ನು ಹೊಂದಿರುವ ವಿಮರ್ಶೆಯಲ್ಲಿನ ‘ಹಿಡನ್ ಅಜೆಂಡಾಗಳು’ ಬೇರೆಯದೇ ಆಗಿರಬಹುದು. ಹೀಗಾಗಿ ಇಂಥ ಭಾವನೆಗಳಿಲ್ಲದ ಸಮತೋಲಿತ ಬರವಣಿಗೆಯನ್ನು ನಂಬುವುದು ಸೂಕ್ತ. ಒಂದು ವೇಳೆ ಆ ವಸ್ತು ಅಥವಾ ಸೇವೆ ಇಷ್ಟವಾಗದಿದ್ದರೆ ಅದನ್ನು ಯಾವುದೇ ಭಾವಾತಿರೇಕವಿಲ್ಲದೆಯೂ ಹೇಳಲು ಸಾಧ್ಯವಿದೆ. ಅಂತಹ ಬರವಣಿಗೆಯಲ್ಲಿ ನಿಜಾಂಶವಿರುತ್ತದೆ.
ವಿಮರ್ಶಕರನ್ನೇ ವಿಮರ್ಶಿಸಿ
ಕಾಮೆಂಟ್ ಹಾಕಿದವರ ವಿವರಗಳನ್ನು ಒಮ್ಮೆ ಪರಿಶೀಲಿಸಿ. ಕೆಲವು ವೆಬ್ಸೈಟ್ಗಳಲ್ಲಿ ವಿಮರ್ಶಕರ ಹೆಸರಿಂದ ಮುಂದೆ ‘ಸೀ ಆಲ್ ಮೈ ರಿವ್ಯೂಸ್’ ಆಯ್ಕೆಯಿರುತ್ತದೆ. ಅದನ್ನು ತೆರೆದರೆ ಆ ವ್ಯಕ್ತಿ ಎಲ್ಲೆಲ್ಲಿ ಮತ್ತು ಯಾವ ಯಾವ ಕಾಮೆಂಟ್ ಹಾಕಿದ್ದಾನೆ ಎಂದು ನೋಡಿದರೆ ಅವನ ವಿಶ್ವಾಸಾರ್ಹತೆ ಬಗ್ಗೆ ತಿಳಿಯುತ್ತದೆ. ಒಬ್ಬನೇ ವ್ಯಕ್ತಿ ಒಂದೇ ಕಂಪನಿಯ ವಸ್ತುಗಳ ಬಗ್ಗೆ ಆಗಾಗ ಬರೆಯುತ್ತಲೇ ಇದ್ದರೆ ಅವನಿಗೆ ಆ ಕಂಪನಿಯಿಂದ ಅಥವಾ ಆ ಕಾಮೆಂಟ್ನಿಂದ ಏನೋ ಲಾಭವಿದೆಯೆಂತಲೇ ಅರ್ಥ. ಅಥವಾ ಅತಿ ಕಡಿಮೆ ಸಮಯದಲ್ಲಿ ಸಾಕಷ್ಟು ಕಾಮೆಂಟ್ಗಳನ್ನು ಮಾಡಿದ್ದರೆ ಕೂಡ ಅವುಗಳನ್ನು ಸ್ವಲ್ಪ ಅನುಮಾನದ ಕಣ್ಣುಗಳನ್ನು ನೋಡುವುದು ಒಳಿತು. ಆದರೆ ವಿಮರ್ಶೆ ಹಾಕಿದವರು ಅದಕ್ಕೆ ಪೂರಕವಾದ ಚಿತ್ರಗಳನ್ನೂ ಹಾಕಿದ್ದರೆ ಅದನ್ನು ನಂಬಬಹುದು.
ವಿಶ್ವಾಸಾರ್ಹತೆ ಎಷ್ಟು?
ನೀವು ಗಮನಿಸಿರಬಹುದು, ಕೆಲವು ಆನ್ಲೈನ್ ಶಾಪಿಂಗ್ ತಾಣಗಳ ರಿವ್ಯೂದಲ್ಲಿ ವಿಮರ್ಶಕರ ಹೆಸರಿನ ಕೆಳಗೆ ವೇರಿಫೈಡ್ ಪರ್ಚೇಸ್, ಸರ್ಟಿಫೈಡ್ ಬೈಯರ್ ಇತ್ಯಾದಿ ಬಿರುದುಗಳನ್ನು ಕೊಟ್ಟಿರುತ್ತಾರೆ. ಅಂದರೆ ಅವರು ಅಧಿಕೃತವಾಗಿ ಆ ವಸ್ತುಗಳನ್ನು ಖರೀದಿಸಿದ್ದಾರೆ ಎಂದರ್ಥ. ಅಂಥವರ ವಿಮರ್ಶೆಗಳನ್ನು ನಂಬಬಹುದು. ಕೆಲವೊಮ್ಮೆ ಆ ವಸ್ತುಗಳನ್ನು ಮತ್ತೆಲ್ಲಿಂದಲೋ ಖರೀದಿಸಿರಬಹುದು ಅಥವಾ ಯಾರೋ ಉಡುಗೊರೆಯಾಗಿ ನೀಡಿರಬಹುದು. ಹೀಗಿದ್ದರೂ ಅವು ಪ್ರಾಮಾಣಿಕ ಅಭಿಪ್ರಾಯಗಳಾಗಿದ್ದರೆ ಖಂಡಿತವಾಗಿ ನಂಬಬಹುದು.
ನಿಮ್ಮ ನಿಲುವೇನು?
ಇಷ್ಟೆಲ್ಲ ನೋಡಿದ ಬಳಿಕ ನಿಮ್ಮಲ್ಲಿ ಮತ್ತಷ್ಟು ಗೊಂದಲ ಮೂಡಬಹುದು. ಹೀಗಾಗಿ ಪ್ರತಿ ವಿಮರ್ಶೆಯನ್ನೂ ಕೂಲಂಕಷವಾಗಿ ಓದಿ. ಅವುಗಳ ತಾತ್ಪರ್ಯವೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಂತರ ಮುಂದುವರಿಯಬೇಕೋ ಬೇಡವೋ ನಿರ್ಧರಿಸಿ. ಹಾಗೆಯೇ ಪ್ರತಿ ವಿಮರ್ಶೆಯ ಕೆಳಗೂ ‘ಈ ವಿಮರ್ಶೆಯಿಂದ ನಿಮಗೆ ಸಹಾಯವಾಯಿತೆ?’ ಎಂಬ ಪ್ರಶ್ನೆಯಿದ್ದು ಹೌದು ಮತ್ತು ಇಲ್ಲ ಎಂಬ ಎರಡು ಆಯ್ಕೆಗಳಿರುತ್ತವೆ. ನಿಮಗೆ ನಿಜವಾಗಿಯೂ ಅದರಿಂದ ಪ್ರಯೋಜನವಾಗಿದ್ದರೆ ಹೌದು ಎಂದು ಬರೆಯಿರಿ, ಇದರಿಂದ ಸರಿಯಾಗಿ ವಿಮಶಿಸುವವರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಹಾಗೆಯೇ ತಪ್ಪುತಪ್ಪಾದ ಮಾಹಿತಿ ನೀಡುವ ನಕಲಿ ಕಾಮೆಂಟ್ಗಳಿಗೆ ಇಲ್ಲ ಆಯ್ಕೆ ಒತ್ತಿ. ಇದರಿಂದ ದಾರಿ ತಪ್ಪಿಸುವ ಸುಳ್ಳು ಹೇಳಿಕೆಗಳಿಗೆ ಕಡಿವಾಣ ಬೀಳುತ್ತದೆ.
ಅಮೆಜಾನ್ನಿಂದ ಮೊಕದ್ದಮೆ
‘ನಿಮ್ಮ ಕಂಪನಿ ಪರವಾಗಿ ಒಳ್ಳೆಯ ಕಾಮೆಂಟ್ಗಳನ್ನು ಹಾಕುತ್ತೇವೆ, ನಮಗೆ ಹಣ ಕೊಡಿ’ ಎಂದಿದ್ದ ವ್ಯಕ್ತಿಗಳ ವಿರುದ್ಧ ಆನ್ಲೈನ್ ಮಾರ್ಕೆಟಿಂಗ್ ತಾಣ, ಅಮೆಜಾನ್ ಕೇಸ್ ಹಾಕಿದೆ. ‘ನಾವು ನಿಮ್ಮ ವೆಬ್ಸೈಟ್ನಲ್ಲಿ ಪ್ರೊಡಕ್ಟ್ ಗಳ ವಿಮರ್ಶೆಗೆ 5 ಸ್ಟಾರ್ ಕೊಡುತ್ತೇವೆ, ಅದಕ್ಕೆ ಪ್ರತಿಯಾಗಿ ನಮಗೆ 5 ಡಾಲರ್ ಹಣ ನೀಡಿ’ ಎಂದಿದ್ದ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ಹೂಡಿ ತಕ್ಕ ಶಾಸ್ತಿ ಮಾಡಿದೆ.
No comments:
Post a Comment
Note: only a member of this blog may post a comment.