Tuesday 17 November 2015

ಅಂಧರಿಗೆಂದೇ ಬ್ರೈಲ್‌ ದಿಕ್ಸೂಚಿ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಮೈಸೂರು ರೈಲ್ವೆ ವಿಭಾಗವು ಇದೀಗ ಮೈಸೂರು ನಿಲ್ದಾಣದಲ್ಲಿ ಅಂಧಸ್ನೇಹಿ ‘ಬ್ರೈಲ್ ಮಾರ್ಗಸೂಚಿ’ಯನ್ನು ಅಳವಡಿಸಿ ಹೊಸ ಮೈಲುಗಲ್ಲು ನಿರ್ಮಿಸಿದೆ. ದೃಷ್ಟಿಹೀನರ ಉನ್ನತಿಗಾಗಿಯೇ ಶ್ರಮಿಸುತ್ತಿರುವ ‘ಅನುಪ್ರಯಾಸ್‌ ಟ್ರಸ್ಟ್‌’ ಸಂಸ್ಥೆ ಈ ಸೌಕರ್ಯದ ನಿರ್ಮಾತೃ. ವಿ.ಪಿ. ಸಹನಾ, ಪಂಚಮ್‌ ಕಜ್ಲಾ, ಗೌತಮ್‌ ಕಣ್ಣನ್‌, ಶಕ್ತಿ ಸಿಯಾರಾ, ಕುಮಾರ್‌ ಮೋಹಿತ್‌, ಎ.ಆರ್‌. ಶ್ವೇತಾ ತಂಡದ ಕೈಚಳಕದಲ್ಲಿ ಇದು ಅರಳಿದೆ.

ಅಂಧರು ಸ್ವತಂತ್ರವಾಗಿ ವ್ಯವಹರಿಸಲು, ಸೇವೆ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ‘ಟಿಕೆಟ್‌ ಕೌಂಟರ್‌’, ‘ಪ್ಲಾಟ್‌ಫಾರಂ’, ರೈಲುಗಳ ವೇಳಾಪಟ್ಟಿ, ಪ್ರತೀಕ್ಷಣಾಲಯ, ಶೌಚಾಲಯ, ಉಪಾಹಾರ ಗೃಹ ಸೇರಿದಂತೆ ನಿಲ್ದಾಣದ ಸಮಗ್ರ ಚಿತ್ರಣ ಇದರಲ್ಲಿದೆ.

ಒಂದನೇ ಪ್ಲಾಟ್‌ಫಾರಂನ ಪ್ರವೇಶ ದ್ವಾರದ ಬಳಿಯ ಗೋಡೆಗೆ ಈ ‘ಸ್ಪರ್ಶ ಸಂವೇದಿ ನಕ್ಷೆ’ಯನ್ನು ಅಳವಡಿಸಲಾಗಿದೆ. ಬ್ರೈಲ್‌ ಲಿಪಿ ಬಲ್ಲವರು ನಿಲ್ದಾಣದಲ್ಲಿನ ಸೌಲಭ್ಯಗಳನ್ನು ಗ್ರಹಿಸಲು ಇದು ದಾರಿದೀಪ. ನಕ್ಷೆಯ ಮುಂದೆ ಪ್ರಯಾಣಿಕ ನಿಂತಿರುವ ಜಾಗದಿಂದ ನಿಲ್ದಾಣದ ಯಾವ್ಯಾವ ಭಾಗದಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ವಿಸ್ತೃತ ವಿವರಣೆಯನ್ನು ಒಳಗೊಂಡಿದೆ.

ಮೈಸೂರು ನಿಲ್ದಾಣದ ರೈಲುಗಳ ವೇಳಾಪಟ್ಟಿಯನ್ನು ಅಳವಡಿಸಿ, ಅದರಲ್ಲಿ ಗಾಡಿ ಸಂಖ್ಯೆ, ಹೆಸರು, ವೇಳೆ ಇತ್ಯಾದಿ ನಮೂದಿಸಲಾಗಿದೆ. ‘ಟಿಕೆಟ್‌ ಕೌಂಟರ್‌’ ಯಾವ ದಿಕ್ಕಿಗೆ ಮತ್ತು ಎಷ್ಟು ದೂರ ಇದೆ. ‘ಪ್ಲಾಟ್‌ ಫಾರಂ’ಗಳಿಗೆ ತಲುಪುವುದು ಹೇಗೆ, ಒಂದು ಪ್ಲಾಟ್‌ಫಾರಂನಿಂದ ಮತ್ತೊಂದಕ್ಕೆ ತೆರಳಲು ನಿರ್ಮಿಸಿರುವ ಮೇಲುಸೇತುವೆ ಯಾವ ಭಾಗದಲ್ಲಿದೆ ಎಂಬ ಮಾಹಿತಿ ಇದೆ. ಮೆಟ್ಟಿಲು ಮಾರ್ಗದ ಬದಿಗಳಲ್ಲಿನ ಕಂಬಿಗಳಲ್ಲಿ ಲೋಹದ ಪ್ಲೇಟ್‌ನಲ್ಲಿ ‘ಪ್ಲಾಟ್‌ಫಾರಂ’ (‘ಪಿ1’, ‘ಪಿ2‘, ‘ಪಿ3’...) ಸಂಖ್ಯೆಗಳನ್ನು ಬ್ರೈಲ್‌ನಲ್ಲಿ ಹಾಕಲಾಗಿದೆ. ಪ್ರವೇಶದ್ವಾರಗಳು ಎಲ್ಲೆಲ್ಲಿವೆ ಎಂಬುದನ್ನು ‘ಇ1’, ‘ಇ2’, ‘ಇ3’, ‘ಇ4’ ಸಂಕೇತದಲ್ಲಿ ವಿವರಿಸಲಾಗಿದೆ.

ಉಪಾಹಾರ ಮಂದಿರ, ಕುಡಿಯವ ನೀರಿನ ಘಟಕ, ಪ್ರತೀಕ್ಷಣಾಲಯ, ಶೌಚಾಲಯ ಎಲ್ಲಿದೆ, ಅಲ್ಲಿಗೆ ತಲುಪಲು ಎಷ್ಟು ದೂರ ಕ್ರಮಿಸಬೇಕು ಎಂಬ ಮಾಹಿತಿ ಇದೆ. ‘ಎಚ್‌’ (ಹೋಟೆಲ್), ‘ಡಬ್ಲ್ಯು’ (ವಾಟರ್‌), ‘ಡಬ್ಲ್ಯುಎಲ್‌’ (ವೇಯ್ಟಿಂಗ್‌ ರೂಂ), ‘ಟಿಆರ್‌’ (ಟಾಯ್ಲೆಟ್‌ ರೂಂ) ಸಂಕೇತ ಬಳಸಿ ವಿವರಿಸಲಾಗಿದೆ. ಉಪಾಹಾರ ಗೃಹದಲ್ಲಿ ಲಭ್ಯ ಇರುವ ಪಾನೀಯ, ತಿಂಡಿ ಇತ್ಯಾದಿಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುವಂತೆ ‘ಬ್ರೈಲ್‌ ಮೆನು ಕಾರ್ಡ್‌’ ಇಡಲಾಗಿದೆ.

‘ನಿಲ್ದಾಣದಲ್ಲಿ ಇತರರ ಸಹಾಯವನ್ನು ಪಡೆಯದೆ ಅಂಧರು ಸ್ವತಃ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳುವಂತೆ ಮಾರ್ಗಸೂಚಿಯನ್ನು ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಮೈಸೂರು ನಿಲ್ದಾಣದಲ್ಲಿ ಈ ಸೌಲಭ್ಯವನ್ನು ಅಳವಡಿಸಲಾಗಿದೆ. ಇಂಥ ಮಾರ್ಗಸೂಚಿ ಸೌಕರ್ಯ ಹೊಂದಿದ ದೇಶದ ಪ್ರಥಮ ನಿಲ್ದಾಣ ಇದಾಗಿದೆ. ಮೈಸೂರು ನಿಲ್ದಾಣದಿಂದ ತಿಂಗಳಿಗೆ ಸರಾಸರಿ 4 ಸಾವಿರ ಅಂಧರು ವಿವಿಧೆಡೆಗಳಿಗೆ ಸಂಚರಿಸುತ್ತಾರೆ.
ಈಗ ಬಳಕೆದಾರರಿಂದ ಸಲಹೆ, ಸೂಚನೆಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಆಧರಿಸಿ ಕೆಲ ಮಾರ್ಪಾಡುಗಳನ್ನು ಮಾಡಲಾಗುವುದು’ ಎಂದು ನಕ್ಷೆ ಅಭಿವೃದ್ಧಿ ತಂಡದ ವಿ.ಪಿ. ಸಹನಾ ಹೇಳುತ್ತಾರೆ.

‘ಈಗಾಗಲೇ ಕೆಲವರು ಕುಬ್ಜರಿಗೂ ಅನುಕೂಲವಾಗುವಂತೆ ನಕ್ಷೆಯನ್ನು ಇನ್ನೂ ಸ್ವಲ್ಪ ಕೆಳಗಡೆ ಹಾಕಿದರೆ ಅನುಕೂಲವಾಗುತ್ತದೆ, ಲೋಹದ ಫಲಕ ಅಳವಡಿಸುವುದು ಸೂಕ್ತ, ಸ್ಪರ್ಶ ಸಂವೇದಿ ನೆಲಹಾಸು ವ್ಯವಸ್ಥೆ ಮಾಡಬೇಕು, ಶ್ರವ್ಯ (ಆಡಿಯೊ) ವ್ಯವಸ್ಥೆ ಇದ್ದರೆ ಒಳಿತು ಎಂಬಿತ್ಯಾದಿ ಹಲವು ಸಲಹೆಗಳು ವ್ಯಕ್ತವಾಗಿವೆ. ಇವೆಲ್ಲವುಗಳನ್ನು ಪರಿಶೀಲಿಸಿ ಎರಡನೇ ಹಂತದಲ್ಲಿ ಅಳವಡಿಸಲು ಗಮನಹರಿಸುತ್ತೇವೆ’ ಎಂದು ಅವರು ತಿಳಿಸುತ್ತಾರೆ.

ಹೈಟೆಕ್‌ ಶೌಚಾಲಯ
ಪರಿಸರ ಸ್ನೇಹಿ ‘ಹೈಟೆಕ್‌’ ಸೌಲಭ್ಯಗಳತ್ತ ಚಿತ್ತ ಹರಿಸಿರುವ ಮೈಸೂರು ರೈಲ್ವೆ ವಿಭಾಗವು ಮೈಸೂರು ನಿಲ್ದಾಣದಲ್ಲಿ ‘ಎಲೆಕ್ಟ್ರಾನಿಕ್‌ ಶೌಚಾಲಯ’ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 6ನೇ ಪ್ಲಾಟ್‌ಫಾರಂನಲ್ಲಿ (ಸಿಎಫ್‌ಟಿಆರ್‌ಐ ಕಡೆಗಿನ ಪ್ರವೇಶ ದ್ವಾರ) ಎರಡು ಹೈಟೆಕ್‌ ಶೌಚಾಲಯಗಳನ್ನು ಅಳಡಿಸಲಾಗಿದೆ. ಕಾವಲುರಹಿತ, ಸ್ವಯಂಚಾಲಿತ ಈ ಶೌಚಾಲಯ 24X7 ಕಾರ್ಯನಿರ್ವಹಿಸುತ್ತದೆ. ಮಕ್ಕಳಿಂದ ವೃದ್ಧರವರೆಗೂ ಬಳಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ವೆಬ್‌ ಪರಿವೀಕ್ಷಣೆಯಡಿ ಕೆಲಸ ಮಾಡುವ ಇದಕ್ಕೆ ಸ್ವಯಂಚಾಲಿತ ಸ್ವಚ್ಛತಾ ತಂತ್ರಜ್ಞಾನ ಅಳವಡಿಸಲಾಗಿದೆ.

‘ಸ್ಟೇನ್‌ಲೆಸ್‌ ಸ್ಟೀಲ್‌ ಬೇಸ್‌’ನ ಈ ಕಿಯೋಸ್ಕ್‌ ಸುಮಾರು 25 ಚದರ ಅಡಿ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ವಿದ್ಯುತ್‌ಗೆ ಸೌರಶಕ್ತಿ ಮತ್ತು ನೀರು ಪೂರೈಕೆಗೆ ‘ಟ್ಯಾಂಕ್‌’ ಇದೆ. ವಿದ್ಯುತ್‌ ಮತ್ತು ನೀರು ಪೋಲಾಗದಂತೆ ತಡೆಯಲು ಸಂವೇದಿ ತಂತ್ರಜ್ಞಾನವೂ ಇದೆ. ಮಹಿಳೆಯರ ಕಿಯೋಸ್ಕ್‌ನಲ್ಲಿ ‘ನ್ಯಾಪ್‌ಕಿನ್‌’ ದಹನ ಯಂತ್ರವೂ ಇದೆ. ಶೌಚಾಲಯದ ಒಳಗೆ ‘ಶ್ರವ್ಯ’ (ಆಡಿಯೊ) ಸೌಕರ್ಯವೂ ಇದೆ. ಶೌಚಾಲಯ ಬಳಕೆಗೆ ಮುಕ್ತವಾಗಿದ್ದರೆ ಹಸಿರು ದೀಪ, ಬಳಕೆಯಲ್ಲಿದ್ದರೆ ಕೆಂಪು ದೀಪ, ನೀರಿನ ಪ್ರಮಾಣ ಕಡಿಮೆ ಇದ್ದರೆ ಹಳದಿ ದೀಪ ಹೊತ್ತಿರುತ್ತದೆ.

ಪ್ರವೇಶದ ಬಳಿ ನಿಗದಿತ ಸ್ಥಳದಲ್ಲಿ 2 ರೂಪಾಯಿ ನಾಣ್ಯ ಹಾಕಿ ಶೌಚಾಲಯದ ಬಾಗಿಲು ತೆರೆಯಬಹುದು. ತಕ್ಷಣ ಸೌರದೀಪ ಮತ್ತು ‘ಫ್ಯಾನ್‌’ ಕಾರ್ಯನಿರ್ವಹಿಸಲು ಆರಂಭಿಸುತ್ತವೆ. ಒಳಗೆ ಹೋದಾಕ್ಷಣ ಬಾಗಿಲು ಹಾಕಿ ಚಿಲಕ ಹಾಕುವಂತೆ ನಿರ್ದೇಶನದ ಧ್ವನಿ ಕೇಳಿಸುತ್ತದೆ. ಒಳಗೆ ಒಂದು ಚಿಕ್ಕ ‘ವಾಷ್‌ ಬೇಸಿನ್‌’ ಮತ್ತು ಬಟ್ಟೆ ‘ಹ್ಯಾಂಗರ್‌’ ಇದೆ.

ಶೌಚಾಲಯದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರು ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಧ್ವನಿ ವಿವರಣೆ ನೀಡಲಾಗುತ್ತದೆ. ಅಲ್ಲದೇ ಶೌಚಾಲಯ ಗುಂಡಿಯೊಳಕ್ಕೆ ಕಸ (ಗುಟ್ಕಾ ಪ್ಯಾಕೇಟ್‌, ಸಿಗರೇಟು, ಬೀಡಿ) ಎಸೆಯದಂತೆ ಸ್ಪಷ್ಟ ಸೂಚನೆಯನ್ನು ಹಾಕಲಾಗಿದೆ. ಕಸವನ್ನು ಹಾಕಲು ಈ ಕಿಯೋಸ್ಕ್‌ ಪಕ್ಕದಲ್ಲಿಯೇ ಬುಟ್ಟಿಯನ್ನೂ ಇಡಲಾಗಿದೆ. ಶೌಚಾಲಯ ಕೊಳಕಾಗಿದ್ದರೆ ‘ಫ್ಲೋರ್‌ ವಾಶ್‌’ ಗುಂಡಿ ಒತ್ತಿ ಸ್ವಚ್ಛಗೊಳಿಸಬಹುದು.

No comments:

Post a Comment

Note: only a member of this blog may post a comment.