Tuesday 27 October 2015

ಗುಡ್ಡದ ಮೇಲೊಂದು ಮಾದರಿ ಶಾಲೆ



GK4KPSC

ದೂರದಿಂದ ನೋಡಿದರೆ ಕಲ್ಲುಬಂಡೆಗಳ ರಾಶಿ. ನೆತ್ತಿ ಸುಡುವ ಬಿಸಿಲು. ಕಾಡು ಪ್ರಾಣಿಗಳೇ ವಾಸಿಸುವ ನಿರ್ಜನ ಪ್ರದೇಶ. ಆದರೆ ಗುಡ್ಡ ಹತ್ತಿದರೆ ಅಲ್ಲೊಂದು ಪುಟ್ಟ ಗ್ರಾಮ. ಗ್ರಾಮದ ಎತ್ತರ ಪ್ರದೇಶದಲ್ಲೊಂದು ಪುಟ್ಟ ಶಾಲೆ. ಶಾಲೆ ಸುತ್ತ ಗಿಡ-ಮರಗಳ ಹಸಿರಿನ ಶೃಂಗಾರ. ಪ್ರಶಾಂತ ವಾತಾವರಣ. ಅಲ್ಲಿ ಕಾಲಿಟ್ಟರೆ ಯಾವುದೋ ಉದ್ಯಾನವನ ಪ್ರವೇಶಿಸಿದ ಅನುಭವ ಆಗುತ್ತದೆ. ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕತ್ರಿದಡ್ಡಿ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸೊಬಗು.

ಬೈಲಹೊಂಗಲ ತಾಲೂಕು ಮೊದಲೇ ಬರಪೀಡಿತ ನಾಡು. ಇಲ್ಲಿ ಅರೆಮಲೆನಾಡಿನಲ್ಲಿ ಸುರಿಯುವ ಮಳೆಯ ಕೊನೇ ಹನಿಗಳು ಮಾತ್ರ ಧರೆಗಿಳಿಯುತ್ತವೆ. ಅಂತರ್ಜಲ ಮಟ್ಟವೂ ಕಡಿಮೆ. ಕುಡಿಯುವ ನೀರಿಗಾಗಿ ಪರದಾಡಬೇಕು. ಆದರೆ ಇಲ್ಲಿನ ಶಾಲೆಯ ಹಸಿರು ಹೊದಿಕೆಗೆ ಯಾವ ತೊಂದರೆಯೂ ಆಗದಂತೆ ಇಲ್ಲಿನ ಗ್ರಾಮಸ್ಥರು, ಶಿಕ್ಷಕರು, ಎಸ್​ಡಿಎಂಸಿ ಸದಸ್ಯರು ನಿಗಾವಹಿಸಿದ್ದಾರೆ. ನೀರಿನ ಕೊರತೆ ತೀವ್ರವಾದರೆ ಶಿಕ್ಷಕರೇ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಒಟ್ಟಿನಲ್ಲಿ ಶಾಲೆಯ ಪರಿಸರ ಹಸಿರಾಗಿರಬೇಕು ಎಂಬುದು ಇವರ ಉದ್ದೇಶ. ಇನ್ನು ಶಾಲೆಗೆ ಕುಡಿವ ನೀರನ್ನು ಗ್ರಾಮಸ್ಥರೇ ಒದಗಿಸಿದ್ದಾರೆ. ಪ್ರತಿ ಕುಟುಂಬದಿಂದ ನೂರು, ಇನ್ನೂರು ಹಣ ಸೇರಿಸಿ, ಪೈಪ್ ಲೈನ್ ಅಳವಡಿಸಿದ್ದಾರೆ.

ಗಿಡ ನೆಡುವುದು ಕಡ್ಡಾಯ

ಕತ್ರಿದಡ್ಡಿ ಶಾಲೆಯ ಇನ್ನೊಂದು ವೈಶಿಷ್ಟ್ಯ ಏನೆಂದರೆ ಇಲ್ಲಿಗೆ ಯಾವುದೇ ಅಧಿಕಾರಿ, ಅತಿಥಿಗಳು ಭೇಟಿ ನೀಡಿದರೂ ಆವರಣದಲ್ಲಿ ಸಸಿ ನೆಡಲೇಬೇಕು. ಇದು ಕಡ್ಡಾಯ. ಹಾಗಾಗಿಯೇ ಇಲ್ಲಿ ಸಾಗವಾನಿ, ಬಾದಾಮಿ, ಬೇವು, ನಿಂಬೆ, ಕರಿಬೇವು, ತೆಂಗು, ಪಪ್ಪಾಯಿ, ನುಗ್ಗೆ, ಬಾಳೆ, ತರಕಾರಿ ಹಾಗೂ ಆಯುರ್ವೆದ ಸಸ್ಯೋದ್ಯಾನ ನಿರ್ವಣವಾಗಿದೆ. ‘ಶಾಲೆಯಲ್ಲಿ ಒಟ್ಟು 167 ವಿದ್ಯಾರ್ಥಿಗಳಿದ್ದಾರೆ. ಒಬ್ಬ ವಿದ್ಯಾರ್ಥಿ ತಲಾ ಎರಡು ಗಿಡಗಳ ಪಾಲನೆ ಮಾಡಲೇಬೇಕು. ಮಕ್ಕಳು ಬಿಸಿಯೂಟ ಮಾಡಿದ ನಂತರ ಪಾತ್ರೆ ಹಾಗೂ ಕೈತೊಳೆದ ನೀರನ್ನು ಗಿಡಗಳಿಗೇ ಹಾಕುತ್ತಾರೆ. ಗಿಡ-ಮರಗಳ ನಿರ್ವಹಣೆಗೆಂದೇ ವಿದ್ಯಾರ್ಥಿಗಳಲ್ಲಿ ಏಳು ಗುಂಪುಗಳನ್ನು ರಚಿಸಲಾಗಿದೆ’ ಎನ್ನುತ್ತಾರೆ ಶಿಕ್ಷಕಿ ಸುಜಾತಾ ಪಾಟೀಲ್.

ಸಕಲ ಸೌಲಭ್ಯ

ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ಸೌಲಭ್ಯಗಳೂ ಇವೆ. ಕಲಿಕೆಗೆ ಪೂರಕವಾದ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್, ಚಿತ್ರಕಲೆ, ಯೋಗ, ಮೈದಾನ, ಹೂದೋಟ, ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಕೇರಂ, ಚೆಸ್ ಸೌಕರ್ಯಗಳಿವೆ. ಎರಡು ಎಕರೆ ಸುಸಜ್ಜಿತ ಆಟದ ಮೈದಾನವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಎತ್ತಿದ ಕೈ. ತೀವ್ರ ನಡಿಗೆ, ಫುಟ್​ಬಾಲ್ ಪಂದ್ಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಸುತ್ತಮುತ್ತಲಿನ ಒಂಭತ್ತು ಹಳ್ಳಿಗಳಿಂದ ಜನರು ಬರುತ್ತಾರೆ. ಪ್ರತಿದಿನ 5-6 ಕಿ.ಮೀ. ನಡೆಯಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ತೀವ್ರ ನಡಿಗೆಯಲ್ಲಿ ಸಹಜವಾಗಿಯೇ ಗೆಲ್ಲುತ್ತಾರೆ. ‘ಶಾಲೆಗೆ ಬರಲು ಕಾಲ್ನಡಿಗೆಯೇ ಗತಿ. ಹಾಗಾಗಿ ತೀವ್ರ ನಡಿಗೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಸಹಾಯವಾಯಿತು’ ಎನ್ನುತ್ತಾಳೆ ವಿದ್ಯಾರ್ಥಿನಿ ಬಾಳಮ್ಮ ಗೋಡಗೇರ.

ಶೇ.100 ಫಲಿತಾಂಶ

ಪ್ರೌಢಶಾಲೆಯ ವಿದ್ಯಾರ್ಥಿಗಳು ಕೇವಲ ಕ್ರೀಡೆ ಹಾಗೂ ಪರಿಸರ ಬೆಳೆಸುವುದರಲ್ಲಿ ಮಾತ್ರ ನಿಸ್ಸೀಮರಲ್ಲ. ಶಿಕ್ಷಣದಲ್ಲೂ ಎತ್ತಿದ ಕೈ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸತತ ಆರು ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದ್ದಾರೆ. 8, 9ನೇ ತರಗತಿಯಲ್ಲಿದ್ದಾಗಲೇ ಮಕ್ಕಳನ್ನು ಮಧ್ಯಮ, ಉತ್ತಮ, ಅತ್ಯುತ್ತಮ ಎಂದು ವಿಂಗಡಿಸಿ, 10ನೇ ತರಗತಿ ಆರಂಭದಲ್ಲೇ ಅವರವರ ಮಟ್ಟಕ್ಕೆ ಅನುಗುಣವಾಗಿ ನುರಿತ ಶಿಕ್ಷಕರಿಂದ ಪಾಠ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಜಿಲ್ಲೆಯಲ್ಲಿ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನ, ಚರ್ಚಾಸ್ಪರ್ಧೆ, ರಸಪ್ರಶ್ನೆ, ವಿಜ್ಞಾನ ಪರೀಕ್ಷೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ‘ವಿವಿಧ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ವಿವಿಧ ವಿಷಯಗಳ ಕುರಿತು ಸಂವಾದ ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಪಠ್ಯ, ಪಠ್ಯೇತರ ಚಟುವಟಿಕೆಗಳ ಶಿಕ್ಷಣ ನೀಡುತ್ತಿರುವ ಕತ್ರಿದಡ್ಡಿ ಸರ್ಕಾರಿ ಪ್ರೌಢಶಾಲೆಗೆ 2015-16ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ಪ್ರೌಢಶಾಲೆ’ ಹಾಗೂ ಸ್ವಚ್ಛ ಪರಿಸರ ಶಾಲೆ’ ಪ್ರಶಸ್ತಿ ಲಭಿಸಿದೆ’ ಎನ್ನುತ್ತಾರೆ ಮುಖ್ಯಾಧ್ಯಾಪಕ .ಎಸ್. ಇಂಗಳಗಿ.

ಅಧಿಕಾರಿಗಳ ಸಹಕಾರ

ಡಿಡಿಪಿಐ, ಬಿಇಒ, ಜನಪ್ರತಿನಿಧಿಗಳು, ಎಸ್​ಡಿಎಂಸಿ ಸದಸ್ಯರು ಹಾಗೂ ಗಣ್ಯರು ಭೇಟಿ ನೀಡಿ, ಸಸಿ ನಡುವ ಮೂಲಕ ಶಿಕ್ಷಕರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆ ಹಾಗೂ ಬಡ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವೈಯಕ್ತಿವಾಗಿ ಧನ ಸಹಾಯ ಮಾಡಿದ್ದಾರೆ.

ಪಾಲಕರಿಗೆ ನೋಟಿಸ್

ಮಕ್ಕಳ ಹಾಜಾರಾತಿ ಹೆಚ್ಚಿಸಲು ಶಿಕ್ಷಕರೇ ದಾರಿ ಕಂಡುಕೊಂಡಿದ್ದಾರೆ. ಶಾಲೆಗೆ ಪದೇಪದೆ ರಜಾ ಮಾಡುವ ಮಕ್ಕಳ ಪಾಲಕರಿಗೆ ಪ್ರತಿವಾರ ನೋಟಿಸ್ ನೀಡುತ್ತಾರೆ. ಮೂರು ನೋಟಿಸ್ ನೀಡಿದರೂ ವಿದ್ಯಾರ್ಥಿಗಳು ರಜಾ ಮಾಡುತ್ತಿದ್ದರೆ ಸ್ವತಃ ಶಿಕ್ಷಕರೇ ಮನೆಗೆ ತೆರಳಿ, ಪಾಲಕರೊಂದಿಗೆ ರ್ಚಚಿಸಿ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಮಕ್ಕಳ ಹಾಜರಾತಿ ಸಂಖ್ಯೆ ನಾಲ್ಕು ವರ್ಷಗಳಿಂದ ಶೇ.97 ಇದೆ.
 #PRAVEENBH

No comments:

Post a Comment

Note: only a member of this blog may post a comment.