ಹಳಿಯಾಳ: ಸತತ ಪ್ರಯತ್ನ, ಸಾಧಿಸುವ ಛಲ, ನಿರ್ದಿಷ್ಟ ಗುರಿ, ಸೂಕ್ತ ಮಾರ್ಗದರ್ಶನ ಇದ್ದರೆ
ಜೀವನದಲ್ಲಿ ಯಶಸ್ಸು ಶತಃಸಿದ್ಧ ಎಂಬುದಕ್ಕೆ ಪಿಎಸ್ಐ ಹುದ್ದೆಗೆ ಆಯ್ಕೆಯಾದ ನಾಗವ್ವ
ಸಾಕ್ಷಿ.
ಬಡತನ, ಕಷ್ಟ, ನೋವು, ಸಂಘರ್ಷ ಗಳನ್ನೇ ಎದುರಿಸುತ್ತ ಬಂದ ತರಕಾರಿ ಮಾರುವ ಯಲ್ಲವ್ವಳ ಕುಟುಂಬದಲ್ಲೀಗ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಓಶೀಮಠ ದಿನಸಿ ಅಂಗಡಿಯ
ಜಗುಲಿಯಲ್ಲಿ ತರಕಾರಿ ಮಾರಾಟ ಮಾಡುವ ಯಲ್ಲವ್ವ ಉತ್ತಮ ಶಿಕ್ಷಣ ಕೊಡಿಸಿದ್ದರಿಂದ ನಾಗವ್ವ ಈಗ ಪಿಎಸ್ಐ ತರಬೇತಿ ಪಡೆಯುತ್ತಿದ್ದಾರೆ.
ತಾಯಿಗೆ ನೆರವಾಗಲು,
ಶಿಕ್ಷಣ ಪಡೆಯಲು ನಾಗವ್ವ ಕೆಲ ಮನೆಗಳಲ್ಲಿ ಪಾತ್ರೆ, ಬಟ್ಟೆ ತೊಳೆಯುವ ಜತೆಗೆ ಬಟ್ಟೆ ಹೊಲಿಯುವ ಕೆಲಸವನ್ನೂ ಮಾಡಿದರು. ಅವಕಾಶ
ಸಿಕ್ಕಾಗ ತರಕಾರಿಯನ್ನೂ ಮಾರಿದರು. ಹೇಗೋ
ಕಷ್ಟಪಟ್ಟು ಬಿಎ ಪೂರೈಸಿದರು. ಬಾಲ್ಯದಲ್ಲೇ ಪೊಲೀಸ್ ಇಲಾಖೆ ಸೇರುವ ಕನಸು ಕಂಡಿದ್ದ
ನಾಗವ್ವ ಗೃಹರಕ್ಷಕ ದಳ ಸೇರಿ ಪೊಲೀಸ್ ಇಲಾಖೆಯ ಕಾರ್ಯಗಳನ್ನು ಹತ್ತಿರದಿಂದ
ನೋಡಿದರು. ಈ ಮಧ್ಯೆ, ಪಿಎಸ್ಐ ಹುದ್ದೆಗೆ ಬಂದ ಸಂದರ್ಶನದಲ್ಲಿ ತೇರ್ಗಡೆಯಾಗಿ, ಅಕ್ಟೋಬರ್ನಿಂದ ಪಿಎಸ್ಐ ತರಬೇತಿಗೆ
ಸೇರಿಕೊಂಡಿದ್ದಾರೆ.
ತಾಲೂಕಿನ ತಾಟಗೇರಾ ಯಲ್ಲವ್ವಳ ಊರು. ಮಕ್ಕಳ ಭವಿಷ್ಯ ಅರಸಿ ಹಳಿಯಾಳಕ್ಕೆ ವಲಸೆ.
ಅವಳಿಗೆ 4 ಮಕ್ಕಳು. ಹಿರಿಯ ಮಗ ಮದುವೆಯಾಗಿ
ಬೆಳಗಾವಿಯಲ್ಲಿದ್ದರೆ, ಎರಡನೇಯವಳೇ
ನಾಗವ್ವ. ಮತ್ತಿಬ್ಬರು ಪುತ್ರರು. ಹೆಣ್ಮಕ್ಕಳಿಗೆ
ಶಿಕ್ಷಣ ನೀಡಬಾರದು. ಸಣ್ಣ ವಯಸ್ಸಲ್ಲೇ
ಮದುವೆ ಮಾಡಬೇಕೆಂಬ ಮನೆ ಯಜಮಾನ ಮಾರುತಿ ಪಾಟೀಲರ ಹಠ, ಅಸಹಕಾರಕ್ಕೆ
ಮಣಿಯದ ಯಲ್ಲವ್ವ ಬರಿಗೈಯಲ್ಲಿ
ಹಳಿಯಾಳಕ್ಕೆ ಬಂದು, ತರಕಾರಿ ಮಾರಿ, ಮಕ್ಕಳಿಗೆ
ಶಿಕ್ಷಣ ನೀಡಿದರು.
ನನ್ನ ತಾಯಿಯಂತೆ ಬಡತನದ ಬೇಗೆಯಲ್ಲಿ ನೊಂದ ಸಾಕಷ್ಟು ತಾಯಂದಿರು ಸಮಾಜದಲ್ಲಿದ್ದಾರೆ. ಅವರಿಗೆ ರಕ್ಷಣೆ, ಸಾಮಾಜಿಕ ನ್ಯಾಯ ನೀಡುವ ಏಕೈಕ ಉದ್ದೇಶದಿಂದ ಪೊಲೀಸ್ ಇಲಾಖೆ ಆಯ್ಕೆ
ಮಾಡಿಕೊಂಡಿದ್ದು, ಪ್ರಾಮಾಣಿಕ
ಅಧಿಕಾರಿಯಾಗುತ್ತೇನೆ.
| ನಾಗವ್ವ ಪಾಟೀಲ
ಇಂದು ಸನ್ಮಾನ
ಪಿಎಸ್ಐ ಹುದ್ದೆಗೆ ತಾಲೂಕಿನಿಂದ ಆಯ್ಕೆ ಯಾದ
ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ನಾಗವ್ವ
ಪಾತ್ರರಾಗಿದ್ದಾರೆ. ಅನಕ್ಷರಸ್ಥೆಯಾಗಿದ್ದರೂ
ಮಗಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ
ಆದರ್ಶಪ್ರಾಯವಾದ ಯಲ್ಲವ್ವಳಿಗೆ ಅ.27
ರಂದು ತಾಲೂಕು ಆಡಳಿತ ಸನ್ಮಾನಿಸುತ್ತಿದೆ
#PRAVEENBH
No comments:
Post a Comment
Note: only a member of this blog may post a comment.