ನಮ್ಮದೂ ಒಂದು ಓದೇ? ಬಿಇ, ಬಿಟೆಕ್, ಬಿಸಿಎ ಅಥವಾ ಕಡೇ ಪಕ್ಷ ಡಿಪ್ಲೊಮಾನೂ ಆಯ್ದುಕೊಳ್ಳಲಾಗಲಿಲ್ಲ.
ಯಾವುದಕ್ಕೂ ಸೀಟು ಸಿಗದ ಕಾರಣ ಬಿಎ ಸೇರಿಕೊಂಡೆ. ಈ ಪದವಿಯಿಂದ ಯಾವ ಜಾಬು ಸಿಗಲು ಸಾಧ್ಯ? ಎಲ್ಲರೂ ಓದುತ್ತಾರೆಂದು ಓದುತ್ತಿದ್ದೇನೆ ಅಷ್ಟೇ…’
ಸಾಮಾನ್ಯ ಪದವಿಗಳಾದ ಬಿಎ, ಬಿಎಸ್ಸಿ, ಬಿಂಕಾ ಓದುವ ಬಹುತೇಕ ವಿದ್ಯಾರ್ಥಿಗಳು ಹೀಗೇ ಅಂದುಕೊಳ್ಳುವುದು. ಅವರಲ್ಲಿರುವ ಕೀಳರಿಮೆ ನೋಡಿದರೆ ನಿಜಕ್ಕೂ ಕಳವಳವಾಗುತ್ತದೆ. ಅಂಥವರ ಕಣ್ಣು ತೆರೆಸುವ ನೈಜ ಕಥೆಯೊಂದು ಇಲ್ಲಿದೆ.
ಈ ಕಥೆ ಆರಂಭವಾಗುವುದು ಅವಿಭಜಿತ ಆಧ್ರಪ್ರದೇಶದ ಕರೀಂನಗರ ಜಿಲ್ಲೆಯ ಗರ್ಜನಾಪಳ್ಳಿ ಎಂಬ ಹಳ್ಳಿಯಿಂದ. ಇಲ್ಲಿನ ತೀರಾ ಹಿಂದುಳಿದ ಬಂಜಾರಾ ಸಮುದಾಯದ ಸಾಮಾನ್ಯ ಮಹಿಳೆಯೊಬ್ಬಳು ಮದುವೆಯಿಂದಾಗಿ ಅರ್ಧಕ್ಕೆ ನಿಂತ ಬಿಎ ಮುಗಿಸಿ, ದೂರ ಶಿಕ್ಷಣದ ಮೂಲಕ ಎಂಎ ಓದಿ, 9 ವರ್ಷದ ಮಗಳನ್ನು ಸಲಹುತ್ತ ಐಎಎಸ್ ಪಾಸು ಮಾಡಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ದೇಶಾದ್ಯಂತ ಹೆಸರು ಮಾಡಿದ್ದಾಳೆ ಎಂದರೆ ಅಚ್ಚರಿಯಾದೀತು. ಅಚ್ಚರಿಯಾದರೂ ಇದು ಸತ್ಯ.
ಈಕೆಯ ಹೆಸರು ಬಿ. ಚಂದ್ರಕಲಾ. ಈಕೆ ಜನಿಸಿದ್ದು 1979ರಲ್ಲಿ. ಹೈದರಾಬಾದಿನ ಕೋಟಿ ವಿಮೆನ್ಸ್ ಕಾಲೇಜಿನಲ್ಲಿ ಬಿಎ ಎರಡನೇ ವರ್ಷದಲ್ಲಿ ಓದುತ್ತಿರುವಾಗಲೇ ವಿವಾಹವಾಯಿತು. ಪತಿ ಎ. ರಾಮಲು ಶ್ರೀರಾಮಸಾಗರ ಅಣೆಕಟ್ಟು ನಿರ್ಮಾಣ ಯೋಜನೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್. ಹಾಗಾಗಿ ಒಂದು ಹಂತದಲ್ಲಿ ಬಿಎ ಓದು ಅರ್ಧಕ್ಕೆ ನಿಲ್ಲುವಂತಾಯಿತು. ಈ ನಡುವೆ ಆಕೆ ಹೆಣ್ಣು ಮಗುವಿನ ತಾಯಿಯಾದರು. ಅಷ್ಟಾದರೂ ಆಕೆಯಲ್ಲಿದ್ದ ಛಲ ಮಾತ್ರ ಸ್ವಲ್ಪವೂ ಕರಗಲಿಲ್ಲ.
ಮಗಳ ಪಾಲನೆ ನಡುವೆಯೇ ಬಿಎ ಓದಿ, ದೂರ ಶಿಕ್ಷಣ ಮೂಲಕ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪೂರೈಸಿದರು. ಬಳಿಕ ಹೈದರಾಬಾದಿಗೆ ತೆರಳಿ ಭಾರತೀಯ ಲೋಕಸೇವಾ ಆಯೋಗದ ಮೊದಲ ಗ್ರೂಪ್ನ ಪರೀಕ್ಷೆಗೆ ಅಣಿಯಾದರು. ಪ್ರಥಮ ಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಆಂಧ್ರಪ್ರದೇಶದ ಸ್ಪರ್ಧಾತ್ಮಕ ಪರೀಕ್ಷೆಯೊಂದರಲ್ಲಿ ಪಾಸಾಗಿ ಸಹಕಾರ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ನೇಮಕಗೊಂಡರು. ಅಷ್ಟಕ್ಕೇ ತೃಪ್ತರಾಗಲಿಲ್ಲ. ಮತ್ತೆ ಐಎಎಸ್ ಪರೀಕ್ಷೆ ತೆಗೆದುಕೊಂಡರು. ಅಂತಿಮವಾಗಿ ನಾಲ್ಕನೇ ಬಾರಿ ಪಾಸಾಗಿ 409ನೇ ರ್ಯಾಂಕ್ ಗಳಿಸಿದರು.
ಇದು ಈ ಕಥೆಯ ಮೊದಲರ್ಧ ಭಾಗ. ಇನ್ನರ್ಧ ಭಾಗ ಇದಕ್ಕಿಂತಲೂ ಆಸಕ್ತಿಕರವಾದುದು ಮತ್ತು ಹೆಮ್ಮೆ ಎನಿಸುವಂತಹುದು.
ಬಿ. ಚಂದ್ರಕಲಾ ಐಎಎಸ್ ಪೂರ್ಣಗೊಳಿಸಿದ ಬಳಿಕ ಮೊದಲು ನೇಮಕವಾದದ್ದು ಉತ್ತರಪ್ರದೇಶದ ಅಲಹಾಬಾದ್ಗೆ. ಬಳಿಕ 2012ರಲ್ಲಿ ಹಮಿರಪುರಕ್ಕೆ ವರ್ಗಾವಣೆಗೊಂಡರು. ಇದರ ನಂತರ ಮಥುರಾದ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾಗಿ ನೇಮಕವಾದರು. ಅಲ್ಲಿಂದ ಅವರು ವರ್ಗಾವಣೆಗೊಂಡಿದ್ದು ಬುಲಂದಶಹರ ಜಿಲ್ಲೆಗೆ. ಇಲ್ಲಿಯೇ ಅವರ ದಕ್ಷತೆ ಮತ್ತು ಪ್ರಾಮಾಣಿಕತೆ ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಿಗೊಂಡಿದ್ದು.
ದಕ್ಷತೆ, ಪ್ರಾಮಾಣಿಕತೆಗೆ ಹೆಸರು
ಈ ಮೊದಲೇ ಹೇಳಿದ ಹಾಗೆ ಬಿ. ಚಂದ್ರಕಲಾ ಪ್ರಾಮಾಣಿಕತೆ, ದಕ್ಷತೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಇದು ಹೆಚ್ಚಾಗಿ ಪ್ರಚಾರ ಪಡೆದದ್ದು 2014ರ ಡಿಸೆಂಬರ್ನಲ್ಲಿ. ಒಂದು ದಿನ ಜಿಲ್ಲೆಯ ಕಳಪೆ ರಸ್ತೆ ಕಾಮಗಾರಿ ಸಂಬಂಧ ನಡು ಬೀದಿಯಲ್ಲಿ ನಿಂತು ಗುತ್ತಿಗೆದಾರರನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡರು.
‘ಇದು ನೀವು ಕೈಗೊಂಡ ಕಾಮಗಾರಿಯೇ? ಇದಕ್ಕಾಗಿ ನೀವು ಜೈಲಿಗೆ ಹೋಗುತ್ತೀರಿ. ನಿಮ್ಮ ಮನೆಯ ಹಣದಲ್ಲಿ ಕಾಮಗಾರಿ ಕೈಗೊಳ್ಳುತ್ತಿಲ್ಲ. ಬದಲಿಗೆ ಸಾರ್ವಜನಿಕರ ಹಣದಲ್ಲಿ ಎಂಬುದು ಎಚ್ಚರದಲ್ಲಿರಲಿ. ನಿಮಗೆ ನೀಡಿದ 17 ಕಾಮಗಾರಿಗಳ ಪೈಕಿ 10 ಇನ್ನೂ ಆರಂಭಗೊಂಡಿಲ್ಲ. ಬಾಯ್ಮುಚ್ಚಿ. ತಪ್ಪು ನಿಮ್ಮದು. ಇಂತಹ ಕಾಮಗಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. ಇನ್ನೆರಡು ದಿನದಲ್ಲಿ ಗುಣಮಟ್ಟದ ವಸ್ತು ಬಳಸಿ ಕಾಮಗಾರಿ ಆರಂಭಿಸಬೇಕು. ಇಲ್ಲದೇ ಹೋದಲ್ಲಿ ನಿಮ್ಮನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಕಾಮಗಾರಿ ಸ್ಥಳದಲ್ಲಿ ನಿಂತು ಸಾರ್ವಜನಿಕರ ಎದುರೇ ಝಾಡಿಸಿದರು. ಬಿ. ಚಂದ್ರಕಲಾ ಅವರ ದಕ್ಷತೆಗೆ, ನೇರ ನಿಲುವು, ಧೈರ್ಯ, ಬದ್ಧತೆಗೆ ಇದೊಂದು ಪುಟ್ಟ ನಿದರ್ಶನವಷ್ಟೇ.
7 ಲಕ್ಷ ಜನರಿಂದ ವೀಕ್ಷಣೆ
ಪ್ರಸ್ತುತ ಜನಸಾಮಾನ್ಯರು ಭ್ರಷ್ಟಾಚಾರದ ಕುರಿತು ಎಷ್ಟು ರೋಸಿಹೋಗಿದ್ದಾರೆ ಮತ್ತು ಪ್ರಾಮಾಣಿಕ ಅಧಿಕಾರಿಗಳ ಕುರಿತು ಎಷ್ಟು ಅಭಿಮಾನ ಹೊಂದಿದ್ದಾರೆ ಎಂಬುದಕ್ಕೆ ಬಿ. ಚಂದ್ರಕಲಾ ಅವರು ಕಳಪೆ ಕಾಮಗಾರಿ ಕುರಿತು ಗುತ್ತಿಗೆದಾರರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ವಿಡಿಯೋಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಸ್ಪಂದನೆಯೇ ನಿದರ್ಶನ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡ ಈ ವಿಡಿಯೋವನ್ನು 7 ಲಕ್ಷ ಜನ ವೀಕ್ಷಿಸಿದ್ದಾರೆ. 3 ಸಾವಿರ ಜನ ಕಮೆಂಟ್ ಮಾಡಿದ್ದಾರೆ ಮತ್ತು 27,400 ಜನ ಹಂಚಿಕೊಂಡಿದ್ದಾರೆ. ಚಂದ್ರಕಲಾ ಅವರ ಎಚ್ಚರಿಕೆ ಮಾತುಗಳ ಪರಿಣಾಮವಾಗಿ ಮೂವರು ಗುತ್ತಿಗೆದಾರರನ್ನು (ಅವರಲ್ಲಿ ಓರ್ವ ಆಡಳಿತಾರೂಢ ಸಮಾಜವಾದಿ ಪಕ್ಷದ ಸದಸ್ಯನ ಸಹೋದರ) ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಈಗ ಹೇಳಿ, ಸಾಮಾನ್ಯ ಪದವಿ ಓದು ಕೀಳು ಮಟ್ಟದ್ದೇ?
No comments:
Post a Comment
Note: only a member of this blog may post a comment.