Tuesday, 27 October 2015

ಸಂಜುಕ್ತಾ ಮಾದರಿ ಅಧಿಕಾರಿಯ ಸಾಧನೆಯ ಹಾದಿ

 
GK4KPSC
ಸಂಜುಕ್ತಾ


 ಸಿನಿಮಾದಲ್ಲಿ ಮಹಿಳೆಯೊಬ್ಬಳು ಖಾಕಿ ಧರಿಸಿ, ಲಾಠಿ ಹಿಡಿದುಕೊಂಡು ಕಳ್ಳರನ್ನು ಅಟ್ಟಾಡಿಸಿಕೊಂಡು ಓಡುತ್ತಿದ್ದರೆ ಮಹಿಳೆಯರೇಕೆ, ಪುರುಷರೂ ‘ವಾಹ್’ ಎಂದು ಉದ್ಗರಿಸುತ್ತಾರೆ. ಅದನ್ನು ನೋಡಿದ ಪ್ರತಿ ಹೆಣ್ಣುಮಗಳಿಗೂ ತಾನೂ ಒಂದು ದಿನ ಹೀಗೆ ಖಾಕಿ ತೊಡುವಂತಾಗಬೇಕು ಎಂಬ ಕನಸೊಂದು ಮೂಡುತ್ತದೆ. ಚಿಕ್ಕ ವಯಸ್ಸಿನಿಂದಲೇ ಪೊಲೀಸ್ ಅಧಿಕಾರಿ ಆಗಬೇಕೆಂದು ಬಯಸಿ ಅಸ್ಸಾಂನಂಥ ಸೂಕ್ಷ್ಮ ಪ್ರದೇಶದಲ್ಲಿ ಪುಂಡರಿಗೆ ಹೆದರಿಕೆಯ ಬಿಸಿ ಮುಟ್ಟಿಸಿದವರು ಸಂಜುಕ್ತಾ.

ಇಂದು ಶಿಕ್ಷಣ ಎಂದ ಕೂಡಲೇ ಇಂಜಿನಿಯರಿಂಗ್, ಮೆಡಿಕಲ್​ನಂತಹ ವೃತ್ತಿಪರ ಕೋರ್ಸ್​ಗಳನ್ನು ಆಯ್ದುಕೊಳ್ಳುವುದು ವಾಡಿಕೆ. ಕೆಲವೇ ಕೆಲವು ಮಹಿಳೆಯರಿಗೆ ಮಾತ್ರ ಭವಿಷ್ಯದ ಬಗ್ಗೆ ನಿಖರವಾದ ಗುರಿಯಿರುತ್ತದೆ. ಆ ರೀತಿಯ ಗುರಿಯನ್ನು ಹಿಂಬಾಲಿಸಿ ಯಶಸ್ವಿಯಾದವರು ಸಂಜುಕ್ತಾ ಪರಾಶರ. ಯುಪಿಎಸ್​ಸಿ ಪರೀಕ್ಷೆಯಲ್ಲಿ ಆಕೆಗೆ ದೇಶಕ್ಕೆ 85ನೇ ರ್ಯಾಂಕ್ ಸಿಕ್ಕಿತ್ತು. ಮನಸ್ಸು ಮಾಡಿದ್ದರೆ ಆಕೆ ಎ.ಸಿ. ರೂಮಿನೊಳಗೆ ಕುಳಿತು ಯಾವುದಾದರೂ ಒಳ್ಳೆಯ ಹುದ್ದೆ ಅಲಂಕರಿಸಿ ಆರಾಮವಾಗಿ ಕೆಲಸ ಮಾಡಬಹುದಿತ್ತು. ಆ ಸಂದರ್ಭದಲ್ಲಿ ಆಕೆಯ ಮಡಿಲಲ್ಲಿ ಎರಡು ವರ್ಷದ ಮಗ ಬೇರೆ ಇದ್ದ. ಜವಾಹರ್​ಲಾಲ್ ನೆಹರು ವಿವಿಯಿಂದ ಪಿಎಚ್​ಡಿ ಪದವಿ ಕೂಡ ಸಿಕ್ಕಿತ್ತು. ಒಳ್ಳೆಯ ಶಿಕ್ಷಣ, ರ್ಯಾಂಕ್, ಸಂಸಾರದ ಜವಾಬ್ದಾರಿ ಎಲ್ಲ ಇದ್ದರೂ ಆಕೆ ಆಯ್ದುಕೊಂಡಿದ್ದು ಭಯೋತ್ಪಾದಕರೊಂದಿಗೆ ದಿನವೂ ಸೆಣಸಾಡಬೇಕಾದ ಕ್ಲಿಷ್ಟಕರ ಹಾದಿ.

ಆ ಮೂಲಕ ಅಸ್ಸಾಂನ ಮೊದಲ ಮಹಿಳಾ ಐಪಿಎಸ್ ಆಫೀಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಂಜುಕ್ತಾ, ಆ ರಾಜ್ಯದ ಸೋನಿತ್​ಪುರ್ ಜಿಲ್ಲೆಯ ಎಸ್​ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಸ್ಸಾಂನಲ್ಲೇ ಹುಟ್ಟಿ ಬೆಳೆದ ಸಂಜುಕ್ತಾ ರಾಜ್ಯದ ಏಕೈಕ ಮಹಿಳಾ ಐಪಿಎಸ್ ಅಧಿಕಾರಿ. ಮಾಮೂಲಿ ದಿರಿಸಿನಲ್ಲಿ ನೋಡಿದರೆ ಯಾವುದೋ ಮಾಡೆಲ್​ನಂತೆ ಕಾಣುವ ಸಂಜುಕ್ತಾ ಪೊಲೀಸ್ ಖಾಕಿ ತೊಟ್ಟರೆಂದರೆ ಖಡಕ್ ಅಧಿಕಾರಿ. 2006ರ ಬ್ಯಾಚ್​ನ ಐಪಿಎಸ್ ಅಧಿಕಾರಿ ಆಗಿರುವ ಇವರು ಅಧಿಕಾರ ವಹಿಸಿಕೊಂಡಿದ್ದು 2008ರಲ್ಲಿ. ಕಳೆದ 15 ತಿಂಗಳಲ್ಲಿ 65ಕ್ಕೂ ಅಧಿಕ ಕಳ್ಳರನ್ನು ಸೆರೆಹಿಡಿದಿದ್ದಾರೆ. ಪೊಲೀಸ್ ಇಲಾಖೆ ಕುರಿತು ಬಾಲ್ಯದಿಂದಲೂ ಆಸಕ್ತಿ, ಕುತೂಹಲ ಬೆಳೆಸಿಕೊಂಡಿದ್ದ ಸಂಜುಕ್ತಾ ಐಪಿಎಸ್ ಅಧಿಕಾರ ಆಗಲೇಬೇಕೆಂದು ಹಠ ತೊಟ್ಟಿದ್ದರು. ಇಂದಿಗೂ ಪ್ರತಿ ಕಾರ್ಯಕ್ರಮದಲ್ಲಿ ಯುವಜನತೆಯನ್ನು ಕುರಿತು ಮಾತನಾಡುವಾಗ ಯುವಕರು ಇಂಜಿನಿಯರಿಂಗ್, ಮೆಡಿಕಲ್, ಮಾಮೂಲಿ ಡಿಗ್ರಿಗಳಿಗೆ ಸೀಮಿತವಾಗುವ ಬದಲು ಐಪಿಎಸ್ ಅಧಿಕಾರಿಯಾಗುವ ಕನಸು ಕಾಣಬೇಕು. ಆ ಮೂಲಕ ಸಮಾಜವನ್ನು ಭ್ರಷ್ಟರು, ಭಯೋತ್ಪಾದಕರಿಂದ ಮುಕ್ತಗೊಳಿಸಬೇಕುಎಂದು ಕರೆ ಕೊಡುತ್ತಾರೆ.

ಯಾರೂ ಅಮುಖ್ಯರಲ್ಲ

ಪೊಲೀಸ್ ಅಧಿಕಾರಿ ಮಾತ್ರವಲ್ಲದೆ ಕಾನ್​ಸ್ಟೇಬಲ್​ಗೂ ತನ್ನದೇ ಆದ ಗೌರವ, ಪ್ರತಿಷ್ಠೆಯಿರುತ್ತದೆ. ಆದರೆ, ಇಂದಿನ ಸಮಾಜ ಮತ್ತು ಸರ್ಕಾರದ ವ್ಯವಸ್ಥೆಯಲ್ಲಿ ಪೊಲೀಸರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಕಳೆದುಕೊಂಡಿರುವ ನಂಬಿಕೆ ಮತ್ತು ಪ್ರತಿಷ್ಠೆಯನ್ನು ಮತ್ತೆ ಪಡೆಯುವ ಕೆಲಸ ನಮ್ಮಿಂದಲೇ ಆಗಬೇಕು. ಅದಕ್ಕೆ ಪ್ರಾಮಾಣಿಕ ಮತ್ತು ಯುವ ಅಧಿಕಾರಿಗಳು ಇಲಾಖೆಗೆ ಸೇರ್ಪಡೆಯಾಗಬೇಕುಎನ್ನುತ್ತಾರೆ ಸಂಜುಕ್ತಾ. ‘ಬೀದಿಯಲ್ಲೋ, ರಸ್ತೆಯಲ್ಲೋ ನಡೆದು ಹೋಗುವಾಗ ಜನರು ನಮ್ಮನ್ನು ಲಕ್ಷಿಸುವುದೇ ಇಲ್ಲ. ಗೌರವದ ಮಾತಂತೂ ದೂರವೇ ಉಳಿದಿದೆ. ಹೆಚ್ಚೆಂದರೆ ಕೊಂಚ ಭಯಪಡಬಹುದಷ್ಟೆ. ಆದರೆ ಸಾರ್ವಜನಿಕರೂ ನಮ್ಮ ಜೊತೆ ಕೈ ಜೋಡಿಸಿ ಸಮಾಜವನ್ನು ಉತ್ತಮ ದಾರಿಯತ್ತ ನಡೆಸುವಂತಾಗಬೇಕು ಎಂಬುದು ನನ್ನ ಆಶಯಎನ್ನುತ್ತಾರೆ ಅವರು.

ಕೌಟುಂಬಿಕ ಜವಾಬ್ದಾರಿಗಳನ್ನೆಲ್ಲ ನಿಭಾಯಿಸಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿರುವ ಸಂಜುಕ್ತಾ, ಪ್ರತ್ಯೇಕತೆಯ ಕೂಗು ಹಾಕಿದ್ದ ಬೋಡೋ ಉಗ್ರಗಾಮಿಗಳನ್ನು ಮಟ್ಟ ಹಾಕಿದವರು. ಅಸ್ಸಾಂನಲ್ಲಿ ನೆಲೆಯೂರಿದ್ದ ನಕ್ಸಲಿಸಂಗೆ ತಕ್ಕಮಟ್ಟಿಗೆ ಮುಕ್ತಿ ನೀಡಿದವರು. ದಿನಗಟ್ಟಲೆ ಕಾಡಿನಲ್ಲಿ ಅಲೆದು ಪುರುಷ ಅಧಿಕಾರಿಗಳು ಮಾಡಲಾಗದ್ದನ್ನು ಮಾಡಿ ಸೈ ಎನಿಸಿಕೊಂಡಾಕೆ. ಆ ಕಾರಣದಿಂದಾಗಿಯೇ ಸಂಜುಕ್ತಾ ವಿಶೇಷವೆನಿಸುತ್ತಾರೆ.

ಪ್ರಾಮಾಣಿಕತೆಗೆ ಮತ್ತೊಂದು ಹೆಸರು
ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಟನ್​ಗಟ್ಟಲೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು ರಾಜ್ಯದ ಸ್ಮಗ್ಲಿಂಗ್ ಮತ್ತು ಭಯೋತ್ಪಾದಕರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಸಂಜುಕ್ತಾ, ರಾಜ್ಯದ ಮಹಿಳೆಯರಿಗೆ ಭಯಮುಕ್ತ ವಾತಾವರಣ ಕಲ್ಪಿಸಲು ಪಣ ತೊಟ್ಟವರು. ಸಿವಿಲ್ ಡ್ರೆಸ್​ನಲ್ಲಿ ಸಿಬ್ಬಂದಿಯ ಜೊತೆ ಹೋಗಿ ಲೈಂಗಿಕ ದೌರ್ಜನ್ಯ ಎಸಗುವವರು ಮತ್ತು ಕಳ್ಳಕಾಕರನ್ನು ಕಾನೂನು ಸುಪರ್ದಿಗೆ ಒಪ್ಪಿಸಿದಾಕೆ. ಟ್ರಾಫಿಕ್ ಪೊಲೀಸರ ಕುರಿತು ಆಸ್ಥೆ ವಹಿಸುವ ಮೂಲಕ ಹಿರಿಕಿರಿಯರೆಂಬ ಭೇದವಿಲ್ಲದೆ ಸಮಾನವಾಗಿ ಕಾಣುವವರು. ಹೆಲ್ಮೆಟ್ ಧರಿಸಿ ಹೋಗುವ, ನಿಯಮಪಾಲನೆ ಮಾಡುವವರ ಬಳಿ ಹೋಗಿ ಅಭಿನಂದಿಸುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾದವರು. ಕೆಟ್ಟದನ್ನು ಮಾಡಿದಾಗ ದಂಡಿಸುವುದು ಎಷ್ಟು ಮುಖ್ಯವೋ ಒಳ್ಳೆಯದು ಮಾಡಿದಾಗ ಶ್ಲಾಘಿಸುವುದೂ ಅಷ್ಟೇ ಮುಖ್ಯ ಎಂದು ನಂಬಿರುವ ಸಂಜುಕ್ತಾ, ಆ ಭಿನ್ನತೆಯಿಂದಲೇ ಅಲ್ಲಿನ ಜನರ ಮನದಲ್ಲಿ ಸ್ಥಾನ ಪಡೆದಿದ್ದಾರೆ.

ಮಹಿಳೆ ಮನಸ್ಸು ಮಾಡಿದರೆ ಎಂಥ ಕಷ್ಟದ ಕೆಲಸವನ್ನಾದರೂ ಸಾಧಿಸಬಲ್ಲಳು. ಯಾವ ಸವಾಲನ್ನು ಬೇಕಾದರೂ ಸ್ವೀಕರಿಸಬಲ್ಲಳು ಎಂಬುದಕ್ಕೆ ಸಂಜುಕ್ತಾ ತಾಜಾ ಉದಾಹರಣೆ. ಅವರಂತೆ ಬೇರೆಬೇರೆ ರಾಜ್ಯಗಳಲ್ಲಿ ಅನೇಕ ದಕ್ಷ ಮಹಿಳಾ ಅಧಿಕಾರಿಗಳಿದ್ದಾರೆ. ಆದರೆ, ಅಸ್ಸಾಮಿನ ಜನರಿಗೆ, ಅಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಾಗೂ ಆ ರಾಜ್ಯದ ಯುವತಿಯರಿಗೆ ಸದ್ಯಕ್ಕೆ ಸಂಜುಕ್ತಾ ಮಾದರಿಯಾಗಿದ್ದಾರೆ. ದೂರದಲ್ಲೆಲ್ಲೋ ಅವರನ್ನು ಕಂಡಾಗಲೆಲ್ಲ ಅಲ್ಲಿನ ಯುವತಿಯರಲ್ಲಿ ಅವರಂತೆ ತಾನೂ ಆಗಬೇಕು ಎಂದು ಕನಸೊಂದು ಗರಿಗೆದರುತ್ತದೆ. ಮಾಮೂಲಿ ಜೀವನಶೈಲಿಯ ನಡುವೆಯೇ ಅಪರೂಪದ್ದನ್ನು ಸಾಧಿಸುವುದು ಹೇಗೆ ಎಂಬುದನ್ನು ಸಂಜುಕ್ತಾ ನಿರೂಪಿಸಿದ್ದಾರೆ.
#PRAVEENBH

No comments:

Post a Comment

Note: only a member of this blog may post a comment.