Tuesday, 2 February 2016

ಹಸಿರೇ ಮೈವೆತ್ತ ಜ್ಞಾನ ದೇಗುಲ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಶಾಲೆಗಳೆಂದರೆ ಬರೀ ಪಾಠ ಹೇಳುವ ಜಾಗವಷ್ಟೆ ಎಂದುಕೊಂಡರೆ ಅದು ತಪ್ಪಾದೀತು. ಪಾಠದ ಹೊರತಾಗಿಯೂ ಅನನ್ಯ ಕೆಲಸಗಳಿಂದ ಗುರುತಿಸಿಕೊಳ್ಳುವ ಹಲವು ಶಾಲೆಗಳು ನಮ್ಮ ನಡುವೆಯೇ ಇವೆ. ಅಂಥದ್ದೇ ಒಂದು ಶಾಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
ಈ ಶಾಲೆ ಹೀಗೆ ಗುರುತಿಸಿಕೊಳ್ಳಲು ಮುಖ್ಯ ಕಾರಣ ಇಲ್ಲಿನ ಶಿಕ್ಷಕ ದಂಪತಿ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನವನ್ನು ನೀಡದೇ ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲು ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಡೆಸುವ ಮೂಲಕ ಸರ್ಕಾರಿ ಶಾಲೆಗಳನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುವ ಹೊಣೆಗಾರಿಕೆ ತೋರುತ್ತಿದ್ದಾರೆ. ಇಂಥ ಅಪೂರ್ವ ಶಿಕ್ಷಕ ದಂಪತಿಯಿಂದಲೇ ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂದು ಇಷ್ಟು ಎತ್ತರಕ್ಕೆ ಬೆಳೆದುನಿಂತು, ಎಲ್ಲರ ಚಿತ್ತವನ್ನು ತನ್ನತ್ತ ಹರಿಯುವಂತೆ ಮಾಡಿದೆ. ‘ನಮ್ಮ ಬದುಕು ಇತರರಿಗೆ ಮಾದರಿಯಾಗಬೇಕು. ಅದಕ್ಕಾಗಿ ನಮಗೆ ನಾವೇ ಮಾದರಿ ಎಂಬಂತೆ ಬದುಕುವುದನ್ನು ರೂಢಿಸಿಕೊಂಡಾಗ ಇತರರು ನಮ್ಮನ್ನು ಗುರುತಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಎ.ಎಫ್.ಹೂಲಿ ಮತ್ತು ಡಿ.ಎಸ್.ಮಳಲಿ ದಂಪತಿ ಶ್ರಮದಿಂದಾಗಿ ಇಂದು ಶಾಲೆಯ ಆವರಣದಲ್ಲಿ ಸರ್ವಧರ್ಮ ಸಮನ್ವಯಗೊಳಿಸುವ ದೇಗುಲ ನಿರ್ಮಾಣವಾಗಿದೆ, ನಂದನವನದಂತೆ ಕಂಗೊಳಿಸುವ ಉದ್ಯಾನ ಸೃಷ್ಟಿಯಾಗಿದೆ.
ದಾನ ಪರಂಪರೆ ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲೂ ಸ್ಥಳೀಯ ನಿವಾಸಿ ಶಂಕರಗೌಡ ಪಾಟೀಲರು ತಮ್ಮ ತೋಟದಲ್ಲಿ 17 ಗುಂಟೆ ಜಮೀನು ನೀಡಿದ್ದರಿಂದ 2003ರಲ್ಲಿ ಶಾಲೆ ಆರಂಭವಾಗಿದೆ. ಸದ್ಯ ಇಲ್ಲಿ 1ರಿಂದ 5ನೇ ತರಗತಿವರೆಗೆ 58 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆ ಎಲ್ಲ ಶಾಲೆಗಳಂತೆ ಮೊದಲಿಗೆ ಮಾಮೂಲಾಗಿಯೇ ನಡೆಯಿತು. 2010ರಲ್ಲಿ ಈ ದಂಪತಿಗೆ ಇಲ್ಲಿ ವರ್ಗಾವಣೆಯಾಯಿತು. ಅಲ್ಲಿಂದ ಶಾಲೆ ಅನೇಕ ಬದಲಾವಣೆಯನ್ನು ಕಾಣುತ್ತಾ ಬಂದಿದೆ.
ಅಕ್ಷರ ದಾಸೋಹದೊಂದಿಗೆ ಹಸಿರು ವನದ ಮೇಲೆ ಅಪಾರ ಪ್ರೀತಿ ಹೊಂದಿರುವ ಇವರು, ಪ್ರಾಕೃತಿಕ ಸೌಂದರ್ಯದಲ್ಲಿ ಮಕ್ಕಳು ನಲಿಯುತ್ತಾ ಕಲಿಯಬೇಕೆಂಬ ಹಂಬಲ ಹೊತ್ತರು. ಅದರ ಫಲವಾಗಿ ಇಂದು ಶಾಲೆಯ ಅಂಗಳದಲ್ಲಿ ಹಸಿರು ವನ ಅರಳಿನಿಂತಿದೆ. ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಉದ್ಯಾನವನಕ್ಕೆ ಹಣವನ್ನು ಮೀಸಲಿಡುತ್ತಿರುವುದು ಇದಕ್ಕೆ ಮತ್ತೊಂದು ಕಾರಣ. ಕಳೆದ ಐದು ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇದರ ಫಲವಾಗಿ ಉದ್ಯಾನದಲ್ಲಿ ಬೇವು, ಬಾದಾಮಿ, ಚೆರ್ರಿ, ಸಿಲ್ವರ್‌ ಪರ್ಕ್‌, ಪಾಷ್ಟೊ ಪಾರ್ಮ್‌, ಹೊಂಗೆ, ನುಗ್ಗೆ, ಸಂಪಿಗೆ, ಕರಿಬೇವು... ಹೀಗೆ ನೂರಾರು ಬಗೆಯ ಗಿಡ–ಮರಗಳು ಬೆಳೆದು ನಿಂತು ಮಕ್ಕಳ ಅಧ್ಯಯನಕ್ಕೆ ಮುದ ನೀಡುತ್ತಿವೆ. ಹಾಗೆಯೇ ಇಲ್ಲಿ ಬೆಳೆಸಿರುವ ಹಸಿರು ಹುಲ್ಲುಹಾಸು ಶಾಲೆ ಅಂದಚೆಂದಕ್ಕೆ ಮೆರಗು ತಂದಿದೆ.
ಗಿಡ ಮರಗಳನ್ನು ಪೋಷಿಸುವಲ್ಲಿ ಮಕ್ಕಳ ಪರಿಶ್ರಮವೂ ಅಪಾರವಾಗಿದೆ. ಇಲ್ಲಿ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಈ ಶಾಲಾ ಆವರಣದ ಗಿಡಮರಗಳ ಜವಾಬ್ದಾರಿ ಹೊತ್ತು ಕಾಳಜಿಯಿಂದ ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಮಹಾಲಿಂಗಪುರ ಜೆ.ಸಿ ಸಂಸ್ಥೆಯ ಸಹಕಾರದಿಂದ 100 ಕುಂಡದಲ್ಲಿ ವಿವಿಧ ಜಾತಿಯ ಸಸಿ ನೆಟ್ಟು ಒಂದು ಮಗುವಿಗೆ ಎರಡರಂತೆ ಕುಂಡಗಳನ್ನು ನೀಡಿ ಅವುಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಶಾಲೆಯ ಉದ್ಯಾನವನವು ಮಕ್ಕಳಿಗೆ ಒಂದು ಉತ್ತಮ ಪರಿಸರ ಪಾಠವನ್ನು ನೀಡುತ್ತಿದೆ. ಮರಗಳಿಗೆ ನೀರುಣಿಸಲು ಮಾಡಿರುವ ಸ್ವಯಂಚಾಲಿತ ಪೈಪ್‌ಲೈನ್ ವ್ಯವಸ್ಥೆ, ಡ್ರಿಪ್, ಕಾರಂಜಿ, ಸ್ಪ್ರಿಂಕ್ಲರ್‌ಗಳ ನೀರಿನ ಸಮರ್ಪಕ ಬಳಕೆ ಹಾಗೂ ನೀರಿನ ಉಳಿತಾಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿವೆ. ಮಕ್ಕಳು ಇಲ್ಲಿ ಶ್ರಮದಾನದ ಮಹತ್ವವನ್ನು ಕಲಿಯುತ್ತಿದ್ದಾರೆ.
ಆಕರ್ಷಕ ವರ್ಗ ಕೋಣೆಗಳು
ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಶಾಲೆಯಲ್ಲಿ ಈ ಶಿಕ್ಷಕ ದಂಪತಿ ವಿನ್ಯಾಸಗೊಳಿಸಿರುವ ತರಗತಿ ಕೋಣೆಗಳು ಆಕರ್ಷಣೀಯವಾಗಿವೆ. ಪ್ರತಿ ಕೋಣೆಯಲ್ಲೂ ತರಗತೀವಾರು ವಿಷಯಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಪಾಠೋಪಕರಣಗಳನ್ನು ಅಳವಡಿಸಲಾಗಿದೆ. ಪರಿಸರಸ್ನೇಹಿ ಗ್ಲಾಸ್‌ಬೋರ್ಡ್‌ ಬಳಿಸಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿದ್ದಾರೆ.
‘ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರ ಮಗ ಶ್ರೀಕಾಂತ ಪಾಟೀಲ ಶಾಲೆಯ ಉದ್ಯಾನವನ ನಿರ್ವಹಣೆಗೆ ಬೋರ್‌ವೆಲ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ನಮ್ಮ ಅನುಪಸ್ಥಿತಿಯಲ್ಲಿ ಇಲ್ಲೇ ವಾಸವಿರುವ ಮುತ್ತಪ್ಪ ಗೋಧಿ ಹಾಗೂ ಉಮೇಶ ಹಳಮನಿ ಶಾಲೆಯ ಉದ್ಯಾನವನ ನಿರ್ವಹಣೆ ಮಾಡುತ್ತಾರೆ. ಹೀಗೆ ಎಲ್ಲರ ಸಹಕಾರದಿಂದ ಈ ಶಾಲೆ ಇಷ್ಟರಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ’ ಎನ್ನುತ್ತಾರೆ ದಂಪತಿ.
‘ದೇವನೊಬ್ಬ ನಾಮ ಹಲವು’ ಎಂಬ ತತ್ವದ ತಳಹದಿಯ ಮೇಲೆ ಸರ್ವಧರ್ಮ ಸಮನ್ವಯ ಸಂಕೇತವಾಗಿ ಶಾಲೆಯ ಆವರಣದಲ್ಲಿಯೇ ಭವನವನ್ನು ನಿರ್ಮಿಸಿರುವ ಹಿಂದೆ ಇದೇ ದಂಪತಿ ಶ್ರಮವಿದೆ. ಇದಕ್ಕೆ ಸ್ಥಳೀಯ ಹಲವು ಸಂಘ ಸಂಸ್ಥೆಗಳೂ ನೆರವಾಗಿವೆ. ಈ ಶಿಕ್ಷಕ ದಂಪತಿ ಹಾಗೂ ಶಾಲೆಯನ್ನು ಹಲವು ಪ್ರಶಸ್ತಿಗಳು ಹುಡುಕಿ ಬಂದಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಹಸಿರು ಶಾಲೆ’ ಪ್ರಶಸ್ತಿಯೂ ದಕ್ಕಿದೆ.

No comments:

Post a Comment

Note: only a member of this blog may post a comment.