ತಮಿಳುನಾಡಿನಲ್ಲಿ ದಶಕಗಳ ಹಿಂದೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳು ಪೈ ಪೋಟಿಯ ಮೇಲೆ ಉಚಿತ ಯೋಜನೆಗಳನ್ನು ಘೋಷಿಸಿದ ಮೇಲೆ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯ ವಾಗಿ ಬೆಂಗಳೂರಿನಲ್ಲಿ ತಮಿಳು ಕಾರ್ಮಿಕರ ಸಂಖ್ಯೆ ಗಮನಾ ರ್ಹವಾಗಿ ಕಡಿಮೆಯಾಗಿ, ಅವರ ಸ್ಥಾನವನ್ನು ಉತ್ತರ ಭಾರತದ ಕಾರ್ಮಿಕರು ತುಂಬುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದರಲ್ಲಿ ಸತ್ಯವಿಲ್ಲದಿಲ್ಲ.

ಹೀಗೊಂದು ಅಭಿಪ್ರಾಯವು ಕಳೆದ ಕೆಲವು ದಿನಗಳಿಂದ ರಾಜಕೀಯದ ಪಡಸಾಲೆಯಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು, ತಾನು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಮತದಾರ ರಿಗೆ ಭರವಸೆ ನೀಡಿ, ರಾಜಕೀಯ ವಿಶ್ಲೇಷಕರ ಮತ್ತು ಜನಸಾಮಾನ್ಯರ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಅಧಿಕಾರದ ಗದ್ದುಗೆ ಹಿಡಿದಿತ್ತು. ಈ ಗೆಲುವಿನ ಹಿಂದೆ, ಅಂದಿನ ಬಿಜೆಪಿ ಸರಕಾರದ ವಿರುದ್ಧದ ‘ಆಡಳಿತ-ವಿರೋಧಿ’ ಅಲೆ ಗಿಂತ, ಗ್ಯಾರಂಟಿಗಳ ಪರಿಣಾ ಮವೇ ಹೆಚ್ಚಾಗಿತ್ತು ಎಂಬುದು ಸರ್ವೇ ಸಾಮಾನ್ಯ ಅಭಿಪ್ರಾ ಯವಾಗಿತ್ತು. ಇಂಥ ಗ್ಯಾರಂಟಿ ಗಳು ಇಲ್ಲದಿದ್ದಿದ್ದರೆ, ಅಧಿಕಾರವೆಂಬುದು ಕಾಂಗ್ರೆಸ್‌ಗೆ ಕನಸಾಗೇ ಉಳಿಯುತ್ತಿತ್ತು ಎಂಬ ಮಾತು ದೊಡ್ಡದಾಗಿ ಕೇಳುತ್ತಿತ್ತು.
ಕರ್ನಾಟಕದಲ್ಲಿನ ಉಚಿತ ಗ್ಯಾರಂಟಿಗಳ ಪ್ರಯೋಗ ಯಶಸ್ವಿಯಾಗಿದ್ದೇ ಆಗಿದ್ದು, ರಾಜ ಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಅಭಿವೃದ್ಧಿ ಯೋಜನೆಗಳು ಹಿಂದಿನ ಸಾಲಿಗೆ ಸರಿದು, ಗ್ಯಾರಂಟಿಗಳು ಮುನ್ನೆಲೆಗೆ ಬಂದಿವೆ. ತೀರಾ ಇತ್ತೀಚಿನವರೆಗೆ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ರಸ್ತೆ, ನೀರು, ಹೆದ್ದಾರಿ, ಹೊಸ ರೈಲು/ರೈಲುಮಾರ್ಗ, ವಿಮಾನ ನಿಲ್ದಾಣ, ಆಸ್ಪತ್ರೆ, ಮೆಡಿಕಲ್-ಎಂಜಿನಿಯರಿಂಗ್ ಕಾಲೇಜುಗಳು, ಹೊಸ ಉದ್ಯಮಗಳು, ನೌಕರರಿಗೆ ವೇತನ ಪರಿಷ್ಕರಣೆಗಳು, ರೈತರ ಸಾಲ/ಬಡ್ಡಿ ಮನ್ನಾ ಮುಂತಾದ ಪ್ರಸ್ತಾವಗಳು ಮುನ್ನೆಲೆಯಲ್ಲಿ ಇರುತ್ತಿದ್ದವು.
ಕ್ರಮೇಣ ಇವು ನೇಪಥ್ಯಕ್ಕೆ ಜಾರಿದ್ದು, ಮತದಾರರನ್ನು ಸೆಳೆಯಬೇಕೆಂಬ ಏಕೈಕ ಉದ್ದೇಶ ದಿಂದ ರಾಜಕೀಯ ಪಕ್ಷಗಳು ಅವುಗಳ ಸ್ಥಾನಗಳನ್ನು ‘ಗ್ಯಾರಂಟಿ ಯೋಜನೆ’ಗಳಿಗೆ ನೀಡಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆರಂಭಿಸಿದ್ದ (ಇದಕ್ಕೂ ಮುನ್ನ ಅರವಿಂದ ಕೇಜ್ರಿ ವಾಲರು ದೆಹಲಿಯಲ್ಲಿ ಇದಕ್ಕೆ ಒಂದು ರೀತಿಯಲ್ಲಿ ಅಡಿಪಾಯ ಹಾಕಿದ್ದುಂಟು ಎನ್ನಿ!) ಈ ಉಚಿತ ಭಾಗ್ಯಗಳನ್ನು ಮಿಕ್ಕ ಕೆಲವು ಪಕ್ಷಗಳು ಲೇವಡಿ ಮಾಡಿದ್ದವು.
‘ಇಂಥ ಗ್ಯಾರಂಟಿಗಳು ದೇಶದ ಅಭಿವೃದ್ಧಿಗೆ ಮಾರಕ, ಇದರಿಂದ ದೇಶವು ದಿವಾಳಿಯಾಗು ತ್ತದೆ, ಪಾಕಿಸ್ತಾನ-ಶ್ರೀಲಂಕಾ-ಅಫ್ಘಾನಿಸ್ತಾನ ದೇಶಗಳಂತೆ ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಭಿಕ್ಷಾಟನೆ ಮಾಡಬೇಕಾಗುತ್ತದೆ’ ಎಂದೆಲ್ಲಾ ಅವು ಟೀಕಿಸಿದ್ದವು, ಇವನ್ನು ‘ಬಿಟ್ಟಿಭಾಗ್ಯಗಳು’ ಎಂದು ಅಪಹಾಸ್ಯಗೈದಿದ್ದವು. ಆದರೆ ಇಂಥ ಪಕ್ಷಗಳೇ, ಈ ಸೂತ್ರವನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ‘ಡಿವಿಡೆಂಡ್’ ಪಡೆದಿದ್ದನ್ನು ಜನಸಾಮಾನ್ಯರು ಈಗಾಗಲೇ ನೋಡಿದ್ದಾರೆ.
ಕರ್ನಾಟಕದ ನಂತರ ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಮಹಾರಾಷ್ಟ್ರಗಳಲ್ಲಿನ ರಾಜಕೀಯ ಪಕ್ಷಗಳು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡವು. ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇದು ಅತಿರೇಕಕ್ಕೆ ಹೋಗಿ, ಸ್ಪರ್ಧೆಯೆಂಬುದು ರಾಜಕೀಯ ಪಕ್ಷಗಳು/ವ್ಯಕ್ತಿಗಳ ಮಧ್ಯೆ ನಡೆಯದೇ ಉಚಿತ ಗ್ಯಾರಂಟಿಗಳ ನಡುವೆ ನಡೆಯಿತು ಎನ್ನಲಾಗುತ್ತದೆ. ಯಾರು ಹೆಚ್ಚು ಸಂಖ್ಯೆಯಲ್ಲಿ ಮತ್ತು ಮೊತ್ತದಲ್ಲಿ ಭಾಗ್ಯಗಳ ಭರವಸೆಯನ್ನು ನೀಡಿದ್ದಾರೆ? ಯಾರ ಗ್ಯಾರಂಟಿ ಹೆಚ್ಚು ಪಕ್ಕಾ ಮತ್ತು ನಂಬಲರ್ಹ? ಎನ್ನುವುದು ಅಂತಿಮ ಹಂತದಲ್ಲಿ ನಿರ್ಣಾಯಕವಾಗಿತ್ತಂತೆ. ಅಲ್ಲಿನ ಭಾಗ್ಯಗಳ ಭರಾಟೆಯನ್ನು ಕಂಡ ಅನ್ಯರಾಜ್ಯದವರು, 'ದೆಹಲಿಯ ಜನರು ಪುಣ್ಯವಂತರು, ನಮ್ಮಲ್ಲೂ ಹೀಗೆ ಚುನಾವಣೆ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು?!’ ಎಂದು ಅಂದುಕೊಂಡಿದ್ದರೆ ಅದೇನೂ ಅತಿಶಯವಲ್ಲ. ಮಾತ್ರವಲ್ಲ, ‘ಈ ಭಾಗ್ಯಗಳನ್ನು ಕಂಡು ದೆಹಲಿಗೆ ವಲಸಿಗರ ದಂಡು ಹೆಚ್ಚಿದರೆ ಗತಿಯೇನು?’ ಎಂದು ಕೆಲ ಪ್ರಜ್ಞಾವಂತರು ಮುಂದಿನ ದಿನಗಳ ಬಗ್ಗೆ ಚಿಂತಿತರಾಗಿದ್ದರೆ ಅದೇನೂ ಅಚ್ಚರಿಯಲ್ಲ.
ಕರ್ನಾಟಕದಲ್ಲಿ ಈ ಭಾಗ್ಯಗಳ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಅಧಿಕಾರ ಕ್ಕೇರಿದಾಗ, ಜನಸಾಮಾನ್ಯರು, ಬುದ್ಧಿಜೀವಿಗಳು, ಆರ್ಥಿಕ ತಜ್ಞರು ಮತ್ತು ದೇಶದ ಆರ್ಥಿಕ ಪ್ರಗತಿಯ ಚಿಂತಕರು ಭಾರಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದು ನಿರಂತರವಾಗಿ ವ್ಯಕ್ತವಾಗುತ್ತಲೇ ಇದೆ. ಇನ್ನು, ‘ಗ್ಯಾರಂಟಿಗಳಿಂದಾಗಿ ದೇಶದ ಅಭಿವೃದ್ಧಿಗೆ ತಡೆಯಾಗು ತ್ತಿದ್ದು, ತೆರಿಗೆದಾರರ ಹಣವು ವೋಟ್‌ಬ್ಯಾಂಕ್ ಸೃಷ್ಟಿಯಲ್ಲಿ ಮತ್ತು ಅದನ್ನು ಉಳಿಸಿ ಕೊಳ್ಳುವಲ್ಲಿ ವಿನಿಯೋಗವಾಗುತ್ತದೆ’ ಎಂಬ ಅಭಿಪ್ರಾಯ ಎಲ್ಲೆಲ್ಲೂ ಕೇಳುತ್ತಿದೆ. ಸರಕಾರಕ್ಕೆ ಸದಾ ತೆರಿಗೆ ನೀಡುತ್ತಿರುವ ಜನರಿಗೆ, ಅದರಲ್ಲಿ ಕಿಂಚಿತ್ತಾದರೂ ಹಿಂದಿರುಗಿ ಬರಲಿ’ ಎಂಬ ವಾದವನ್ನು ಈ ಗ್ಯಾರಂಟಿಗಳ ಸಮರ್ಥಕರು ಮಂಡಿಸುತ್ತಿದ್ದಾರೆ. ತೆರಿಗೆ ಹಣದ ದುರುಪಯೋಗವನ್ನು ತಡೆಯಲು ರಾಜಕೀಯ ಪಕ್ಷಗಳ ವಿರುದ್ಧ ಸಂಘರ್ಷ/ಕಾನೂನು ಹೋರಾಟ ನಡೆಸುವ ಮಾತುಗಳೂ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ.
ನ್ಯಾಯಾಧೀಶರ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯ ವೇಳೆ, ‘ಸರಕಾರದ ಬಳಿ ಉಚಿತ ಕೊಡುಗೆಗಳನ್ನು ನೀಡಲು ಹಣವಿದೆ, ಆದರೆ ನಿವೃತ್ತ ನ್ಯಾಯಾ ಧೀಶರ ಪಿಂಚಣಿಗೆ ಹಣವಿಲ್ಲ’ ಎಂಬ ವ್ಯಾಕುಲದ ಮಾತುಗಳು ಕೇಳಿಬಂದಿದ್ದವಂತೆ. ಸುಪ್ರೀಂಕೋರ್ಟ್‌ನ ನ್ಯಾಯ ಪೀಠವೊಂದು ಇನ್ನೊಂದು ಪ್ರಕರಣದಲ್ಲಿ, ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಪೈಪೋಟಿಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇಂಥ ಯೋಜನೆಗಳನ್ನು ಘೋಷಿಸುವ ಬದಲು, ದೇಶದ ಅಭಿವೃದ್ಧಿಗೆ ದುಡಿಯುವ ಮನಸ್ಥಿತಿಯನ್ನು ಜನರಲ್ಲಿ ಮೂಡಿಸಬೇಕು ಎಂದೂ ಅದು ಸಲಹೆ ನೀಡಿದೆ. ಇಂಥ ಯೋಜನೆಗಳಿಂದ ಜನರು ದುಡಿಮೆಯ ಮನಸ್ಥಿತಿಯನ್ನೇ ಕಳೆದುಕೊಂಡು ಪರಾವಲಂಬಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಉಚಿತ ಪಡಿತರ ಮತ್ತು ಹಣ ನೀಡಿದರೆ ಜನರು ಯಾವುದೇ ಕೆಲಸ ಮಾಡ ಲು ಮುಂದಾಗುವುದಿಲ್ಲ; ಅದರ ಬದಲಿಗೆ ಅವರನ್ನು ಮುಖ್ಯವಾಹಿನಿಗೆ ತಂದು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡಬಹುದಲ್ಲವೇ?’ ಎಂದೂ ಪ್ರಶ್ನಿಸಿದೆ.
ತಮಿಳುನಾಡಿನಲ್ಲಿ ದಶಕಗಳ ಹಿಂದೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳು ಪೈಪೋಟಿಯ ಮೇಲೆ ಉಚಿತಗಳನ್ನು ಘೋಷಿಸಿದ ಮೇಲೆ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ತಮಿಳು ಕಾರ್ಮಿಕರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿ, ಅವರ ಸ್ಥಾನವನ್ನು ಉತ್ತರ ಭಾರತದ ಕಾರ್ಮಿಕರು ತುಂಬುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರಲ್ಲಿ ಸತ್ಯವಿಲ್ಲದಿಲ್ಲ.
ನ್ಯಾಯಮೂರ್ತಿ ಗವಾಯಿಯವರು, “ಕೆಲವು ರಾಜ್ಯಗಳು ಘೋಷಿಸಿದ ಉಚಿತ ಯೋಜನೆ ಗಳಿಂದಾಗಿ ಜನರು ಕೆಲಸ ಮಾಡಲು ಬಯಸುತ್ತಿಲ್ಲ. ನಾನೂ ಕೃಷಿ ಕುಟುಂಬದಿಂದ ಬಂದಿದ್ದು, ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುನ್ನ ಘೋಷಿಸಲಾದ ‘ಫ್ರೀಬೀ’ ಗಳಿಂ ದಾಗಿ ಪಡಿತರವು ಉಚಿತವಾಗಿ ಮನೆಗೆ ತಲುಪುತ್ತಿರುವುದರಿಂದ ಕೃಷಿಕಾರ್ಯಕ್ಕೆ ಕಾರ್ಮಿ ಕರು ಸಿಗದಂತಾಗಿದೆ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿ ಮಾಡಿದ್ದ ಎಲ್ ಆಂಡ್ ಟಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಸ್ವಲ್ಪ ಮುಂದೆ ಹೋಗಿ, “ಸರಕಾರದ ಯೋಜನೆಗಳಿಂದಾಗಿ ಜನರೀಗ ದುಡಿಯುವ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಸೌಖ್ಯದ ಆದ್ಯತೆಯಿಂದಾಗಿ ಕೆಲಸಕ್ಕಾಗಿ ಬೇರೆಡೆಗೆ ಹೋಗುವ ಮನಸ್ಥಿತಿ ಜನರಲ್ಲಿ ಕಡಿಮೆಯಾಗಿದ್ದು, ಇದು ಕಾರ್ಮಿಕರ ಕೊರತೆಗೆ ಕಾರಣವಾಗಿದೆ" ಎಂದಿದ್ದಾರೆ.
ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಪೈಪೋಟಿಯಲ್ಲಿ ಉಚಿತಗಳನ್ನು ನೀಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ-ಅಸಮಾಧಾನ-ಅತೃಪ್ತಿಯನ್ನು ವ್ಯಕ್ತಪಡಿಸಿದ್ದರೆ, ‘ಗ್ಯಾರಂಟಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತದೆ’ ಎಂದು ರಿಸರ್ವ್ ಬ್ಯಾಂಕ್ ಕೂಡ ಎಚ್ಚರಿಸಿದೆ. ಉಚಿತಗಳಿಂದಾಗಿ ಅಭಿವೃದ್ಧಿಗೆ ಅನುದಾನ ದೊರಕುತ್ತಿಲ್ಲ ಅಥವಾ ಕೊರತೆಯಾಗುತ್ತಿದೆ ಎಂಬ ಕೂಗು ಕ್ರಮೇಣ ಜೋರಾಗುತ್ತಿದೆ.
ಗುತ್ತಿಗೆದಾರರ ದೊಡ್ಡ ಮೊತ್ತದ ಬಿಲ್ ಬಾಕಿಯಿದೆ ಎಂಬ ಆರೋಪವೂ ಕೇಳುತ್ತಿದೆ. ಉಚಿತ ಗಳ ನೆರವಿನಿಂದ ಚುನಾಯಿತರಾದವರೂ ಈಗ, ಈ ಯೋಜನೆಗಳ ಮುಂದುವರಿಕೆಗೆ ಅಗೋಚರವಾಗಿ ಮತ್ತು ಕೆಲವರು ನೇರವಾಗಿ ಅಪಸ್ವರ ಹಾಡಲಾರಂಭಿಸಿದ್ದಾರೆ. ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ತಂತ್ರಗಾರಿಕೆಗೆ ತೆರಿಗೆದಾರರ ಹಣವನ್ನು ಬೇಕಾಬಿಟ್ಟಿ ಬಳಸಿ ಕೊಳ್ಳುವ ಪರಿಪಾಠವನ್ನು ನಿಲ್ಲಿಸಲು ಇದು ಸಕಾಲ ಎಂಬ ಚಿಂತನೆ ರೂಪುಗೊಳ್ಳುತ್ತಿದೆ.
ಜಾಗೃತರಾಗುತ್ತಿರುವ ಜನರಿಂದು, “ತೆರಿಗೆದಾರರ ಹಣವು ಕೇವಲ ಕೆಲವರ ಸೊತ್ತಾಗಬೇಕೇ? ಅಭಿವೃದ್ಧಿಗೆ, ಉತ್ಪಾದನಾಶೀಲತೆಗೆ ಬಳಸಬೇಕಾದ ಹಣವನ್ನು ಹೀಗೆ ದುಂದುವೆಚ್ಚ ಮಾಡಿ ದೇಶದಲ್ಲಿ ನಿರುದ್ಯೋಗವನ್ನು ಬೆಳೆಸಬಹುದೇ?" ಎಂದು ಪ್ರಶ್ನಿಸತೊಡಗಿದ್ದಾರೆ. ಅಂತೆಯೇ, ಉಚಿತಗಳ ಫಲಾನುಭವಿಗಳು ಪ್ರತಿ ತಿಂಗಳೂ ಕಾಯುವ ಸುದ್ದಿ ದೊಡ್ಡದಾಗಿ ಕೇಳುತ್ತಿದ್ದು ಈ ಒತ್ತಡವನ್ನು ಸಹಿಸಲಾಗದ ಕೆಲ ಸರಕಾರಗಳು ‘ನಿಶ್ಚಿತ ದಿನ ನೀಡಲು ಇದು ಸಂಬಳ ವಲ್ಲ’ ಎಂಬ ಪಲಾಯನವಾದಿ ಉತ್ತರ ನೀಡುತ್ತಿವೆ. ಈ ಎಲ್ಲ ಬೆಳವಣಿಗೆಗಳು, ಮುಂದಿನ ದಿನಗಳಲ್ಲಿ ಉಚಿತಗಳ ಬಗೆಗಿನ ಮರುಚಿಂತನೆಗೆ ದಾರಿಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
- ರಮಾನಂದ ಶರ್ಮಾ