Pages

Tuesday 17 November 2015

ನದಿ ರಭಸವಾದಷ್ಟು ಹೆಚ್ಚಿನ ಇಂಗಾಲ ಡೈ ಆಕ್ಸೈಡ್ ಬಿಡುಗಡೆ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ

ಜ್ಞಾನಸೆಲೆ
ಲಂಡನ್: ನದಿಗಳು ರಭಸವಾಗಿ ಹರಿದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ! ಇಂಗ್ಲೆಂಡ್ನ ಗ್ಲಾಸ್ಗೋ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಸಂಶೋಧನೆಯಿಂದ ಈ ಅಂಶ ಬಹಿರಂಗಗೊಂಡಿದೆ.
ಸಂಶೋಧಕರ ತಂಡದ ಪ್ರಕಾರ ರಭಸವಾಗಿ ಹರಿಯುವ ನದಿಗಳು ಹಾಗೂ ಕಠಿಣ ಪರಿಶ್ರಮದ ಕೆಲಸ ಮಾಡುವ ಮಾನವನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಕಠಿಣ ಪರಿಶ್ರಮದ ಕೆಲಸ ಮಾಡುವಾಗ ಮನುಷ್ಯರು ಹೇಗೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನ್ನು ಹೊರಹಾಕುತ್ತಾರೋ ಅದೇ ರೀತಿ ನದಿಗಳು ಕೂಡ ರಭಸವಾಗಿ ಹರಿದಂತೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
ಸ್ಕಾಟ್ಲೆಂಡ್ನಲ್ಲಿ ಎರಡು ನದಿಗಳು ಮತ್ತು ಪೆರುವಿಯನ್ ಅಮೆಜಾನ್ನಲ್ಲಿ ನಾಲ್ಕು ನದಿಗಳ ಬಳಿ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಈ ವಿಷಯ ಖಚಿತಪಟ್ಟಿದ್ದಾಗಿ ಸಂಶೋಧಕರ ತಂಡ ತಿಳಿಸಿದೆ.
ಜಾಗತಿಕ ವಾತಾವರಣದ ಮೇಲೆ ಮಾನವನ ಚಟುವಟಿಕೆಗಳಿಂದಾಗಿ ಆಗುವ ಪರಿಣಾಮವನ್ನು ಅರಿಯಲು ಅತ್ಯಂತ ಜಟಿಲವಾಗಿರುವ ಕಾರ್ಬನ್ ಸೈಕಲ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನದಿ, ಸಮುದ್ರ ಮತ್ತು ಮಹಾಸಾಗರಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲ ಅನಿಲದಿಂದಾಗುವ ಪರಿಣಾಮದ ಬಗ್ಗೆ ವಿಜ್ಞಾನಿಗಳ ಸಂಕುಲ ಇದುವರೆಗೆ ಭಾರಿ ಅವಜ್ಞೆ ತೋರಿರುವುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ.
ಸಂಶೋಧನೆ ನಡೆಸಿದ ರೀತಿಯ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರ ತಂಡ, ಪ್ರತಿಯೊಂದು ತಾಣದಲ್ಲಿ ನದಿಗಳು ಪರಿಸರಕ್ಕೆ ಬಿಡುಗಡೆ ಮಾಡುವ ಇಂಗಾಲಡೈಆಕ್ಸೈಡ್ ಅನಿಲದ ಪ್ರಮಾಣವನ್ನು ನೇರಳಾತಿ ಅನಿಲ ವಿಶ್ಲೇಷಕಗಳನ್ನು (ಇನ್ಪ್ರಾರೆಡ್ ಗ್ಯಾಸ್ ಅನಲೈಸರ್ಸ್) ಬಳಸಿ ಪರೀಕ್ಷಿಸಲಾಯಿತು. ನೀರಿನ ಹರಿವಿನ ವೇಗವನ್ನು ಅಳೆಯಲು ಪ್ರತ್ಯೇಕವಾದ ಫ್ಲೋಮೀಟರ್ ಅನ್ನು ಬಳಕೆ ಮಾಡಲಾಯಿತೆಂದು ತಿಳಿಸಿದ್ದಾರೆ.
ಇಂಗಾಲ ಡೈ ಆಕ್ಸೈಡ್ ಬಿಡುಗಡೆ ಹೇಗೆ ಸಾಧ್ಯ?
ನದಿ ದಂಡೆಯಲ್ಲಿನ ಮಣ್ಣು, ಮರಳು, ಕೊಳೆಯುತ್ತಿರುವ ಜೈವಿಕ ತ್ಯಾಜ್ಯಗಳ ಮೂಲಕ ನದಿ ನೀರು ಇಂಗಾಲವನ್ನು ಹೀರಿಕೊಳ್ಳುತ್ತದೆ. ಹರಿಯುವ ರಭಸ ಹೆಚ್ಚಾಗುತ್ತಿದ್ದಂತೆ ನದಿ ನೀರು ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಬಿಡುಗಡೆ ಮಾಡಲಾರಂಭಿಸುತ್ತದೆ. ಒಂದು ಅಂದಾಜಿನ ಪ್ರಕಾರ ಈ ರೀತಿಯಾಗಿ ಪ್ರತಿ ವರ್ಷ 2 ಲಕ್ಷ ಕೋಟಿ ಕಿಲೋಗ್ರಾಂನಷ್ಟು ಇಂಗಾಲ ಡೈ ಆಕ್ಸೈಡ್ ಬಿಡುಗಡೆಯಾಗುತ್ತಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.

No comments:

Post a Comment

Note: only a member of this blog may post a comment.