JNANASELE |
ಬೆಂಗಳೂರು: ಉಡುಗೊರೆ ಹೆಸರಿನಲ್ಲಿ ಬರುವ ಪಾರ್ಸಲ್ ಮುಟ್ಟುವ ಮುನ್ನ ಎಚ್ಚರ. ಏಕೆಂದರೆ, ಸಾವಿರಾರು ರೂಪಾಯಿ ಕಳೆದುಕೊಳ್ಳಬೇಕಾದೀತು.
‘ಗಿಫ್ಟ್’ ಹೆಸರಿನಲ್ಲಿ ವಂಚಕರು ಅಂಚೆ ಇಲಾಖೆ ಸೇವೆಯನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ವಂಚಿಸುತ್ತಿರುವ ಜಾಲ ಉದ್ಯಾನನಗರಿಯನ್ನು ಆವರಿಸುತ್ತಿದೆ. ಬಡವರೇ ಈ ಜಾಲದ ಟಾರ್ಗೆಟ್. ಸಾವಿರಾರು ರೂ. ಗಿಫ್ಟ್ ಪಡೆಯುವ ಸಂತಸದಲ್ಲಿ ನಿತ್ಯ ನೂರಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಬಿಹಾರ, ದೆಹಲಿ, ಗಯಾ ಮತ್ತಿತರ ಕಡೆಯಿಂದ ಅಂಚೆ ಇಲಾಖೆಯ ‘ವಿಪಿಪಿ’ (ವ್ಯಾಲ್ಯುಬಲ್ ಪೇ ಪಾರ್ಸಲ್) ಸೇವೆ ಮುಖಾಂತರ ಗಿಫ್ಟ್ ರವಾನಿಸುವ ಸೋಗಿನಲ್ಲಿ ವಂಚಿಸಲಾಗುತ್ತಿದೆ.
ಸಿದ್ಧಾಪುರ ನಿವಾಸಿ, ಆಟೋ ಚಾಲಕ ಅಂಜುಮ್ ಖಾನ್ಗೆ ಬುಧವಾರ ಜಯನಗರ ಪ್ರಾದೇಶಿಕ ಅಂಚೆ ಕಚೇರಿಯಿಂದ ಕರೆ ಬಂದಿತ್ತು. ನಿಮ್ಮ ಹೆಸರಿಗೆ ವಿಪಿಪಿ ಪಾರ್ಸಲ್ ಬಂದಿದೆ, ತೆಗೆದು ಕೊಂಡು ಹೋಗಿ ಎಂದು ಸೂಚಿಸಿದ್ದರು. ಅಂಚೆ ಕಚೇರಿಗೆ ತೆರಳಿದ ಅಜುಮ್ ಪಾರ್ಸಲ್ ಬಾಕ್ಸ್ ನೋಡಿ ಸಂತಸದಿಂದಲೇ 2 ಸಾವಿರ ರೂ. ಹಾಗೂ ಅಂಚೆ ಸೇವೆ ಶುಲ್ಕ 100 ಸೇರಿ ಒಟ್ಟು 2100 ರೂ. ಪಾವತಿಸಿದ್ದಾರೆ. ಪಾರ್ಸಲ್ ಬಾಕ್ಸ್ ತೆರೆದು ನೋಡಿದರೆ ಹೆಸರಿಲ್ಲದ ಎರಡು ಪೊಟ್ಟಣದಲ್ಲಿ ಪುಡಿಯಿತ್ತು. ಹಿಂದಿ ಪತ್ರಿಕೆಯೊಂದರಲ್ಲಿ ಸುತ್ತಿ, ಬಳಪದ ಬಾಕ್ಸ್ನಲ್ಲಿ ಪ್ಯಾಕಿಂಗ್ ಮಾಡಲಾಗಿದೆ. ಕನಿಷ್ಠ 20 ರೂ. ಬೆಲೆಬಾಳುವ ವಸ್ತುಗಳೂ ಅದರಲ್ಲಿರಲಿಲ್ಲ. ಈ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಹಿ ಹಾಕಿ ಪಾರ್ಸಲ್ ಪಡೆದ ಬಳಿಕ ನಾವೇನೂ ಮಾಡಲಾಗುವುದಿಲ್ಲ ಎಂದು ಹೇಳಿ ಕಳಿಸಿದ್ದಾರೆ.
ಅ.26ರಂದು ನನ್ನ ಮೊಬೈಲ್ಗೆ ಕರೆಬಂತು. ನೀವು 7 ವರ್ಷದಿಂದ ಏರ್ಟೆಲ್ ಮೊಬೈಲ್ ನಂಬರ್ ಬಳಸುತ್ತಿದ್ದೀರಿ. ನಿಮಗೆ ಕಂಪನಿ ವತಿಯಿಂದ 4 ಸಾವಿರ ರೂ. ಮೌಲ್ಯದ ವಾಚ್, 16 ಸಾವಿರ ರೂ. ಮೊತ್ತದ ಮೊಬೈಲ್, 10 ಸಾವಿರ ರೂ. ಚೆಕ್ ಅಂಚೆ ಮುಖಾಂತರ ಬರಲಿದೆ, ಸ್ವೀಕರಿಸಿ ಎಂದು ಹೇಳಿದ್ದರು. ವಂಚಕರು ಕನ್ನಡದಲ್ಲಿಯೇ ಮಾತನಾಡಿದ್ದರು. ಅಂಚೆ ಇಲಾಖೆಗೆ ಪಾರ್ಸಲ್ ಬಂದ ಸಂಗತಿ ತಿಳಿದು ಅದನ್ನು ಸ್ವೀಕರಿಸುವ ಮೊದಲು 2 ಸಾವಿರ ರೂ. ಕಟ್ಟಲು ತಿಳಿಸಿದ್ದರು ಎಂದು ಅಂಜುಮ್ ‘ವಿಜಯವಾಣಿ’ಗೆ ತಿಳಿಸಿದರು.
***
ಜನಜಾಗೃತಿ ಅಗತ್ಯ
ಬೆಲೆಬಾಳುವ ವಸ್ತುಗಳ ಪಾರ್ಸಲ್ ಅನ್ನು ವಿಪಿಪಿ ಸೇವೆ ಮೂಲಕ ಅಂಚೆ ಇಲಾಖೆ ರವಾನಿಸುತ್ತದೆ. ಪಾರ್ಸಲ್ ಪಡೆದವರು ಸಂದಾಯ ಮಾಡಿದ ಮೊತ್ತವನ್ನು ಪಾರ್ಸಲ್ ಕಳುಹಿಸಿದವರ ವಿಳಾಸಕ್ಕೆ ಮನಿಯಾರ್ಡರ್ ಮಾಡಲಾಗುತ್ತದೆ. ಅಂತರ್ಜಾಲ ಮೂಲಕ ಜನಸಾಮಾನ್ಯರ ಮೊಬೈಲ್ ನಂಬರ್ ಪಡೆದು, ಕರೆಮಾಡಿ ಅಂಚೆ ವಿಳಾಸ ಪಡೆದುಕೊಳ್ಳುತ್ತಾರೆ. ನಂತರ ವಿಪಿಪಿ ಸೇವೆಯನ್ನೇ ಅಸ್ತ್ರವನ್ನಾಗಿ ಬಳಸಿ ಪಾರ್ಸಲ್ ರವಾನಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತಿ ವಹಿಸುವುದು ಅಗತ್ಯ ಎಂದು ಪೋಸ್ಟ್ಮಾಸ್ಟರ್ ತಿಳಿಸಿದರು.
***
ತಕ್ಷಣ ದೂರು ಕೊಟ್ಟರೆ ಹಣ ವಾಪಸ್
ವಿಪಿಪಿ ಮೂಲಕ ಪಡೆದ ಪಾರ್ಸಲ್ನಲ್ಲಿ ಪಾವತಿಸಿದ ಹಣದ ಮೌಲ್ಯದಷ್ಟು ವಸ್ತುಗಳು ಇಲ್ಲದಿದ್ದರೂ ವಂಚನೆಯಿಂದ ಪಾರಾಗಲು ನಿಮಗೆ ಅವಕಾವಿದೆ. ಪಾರ್ಸಲ್ ತಂದುಕೊಡುವ ಪೋಸ್ಟ್ ಆಫೀಸ್ ಸಿಬ್ಬಂದಿ ಎದುರಲ್ಲೇ ಬಾಕ್ಸ್ ತೆರೆದು ನೋಡಿ ನಂತರ ನೀವು ಬಯಸಿದ ವಸ್ತು ಇಲ್ಲದಿದ್ದಲ್ಲಿ ಅದನ್ನು ಫೋಟೋ ತೆಗೆದುಕೊಂಡು ಅಂಚೆ ಕಚೇರಿಗೆ ದೂರು ನೀಡಬಹುದು. ಇದರಿಂದಾಗಿ ಅವರು ನಿಮ್ಮನ್ನು ವಂಚಿಸಿದ ಸಂಸ್ಥೆಗೆ ಹಣ ಪಾವತಿಸುವುದನ್ನು ತಡೆ ಹಿಡಿಯುತ್ತಾರೆ. ತನಿಖೆ ನಂತರ ನಿಮ್ಮ ಮನಿಯಾರ್ಡರ್ ವಾಪಸ್ ಪಡೆಯಬಹುದು. ಒಂದೊಮ್ಮೆ ಅನಾಮಧೇಯ ಪಾರ್ಸಲ್ ಪಡೆದು ಹಣ ಕಳೆದುಕೊಂಡಿದ್ದರೆ ಅವರು ಕೂಡಲೇ ದೂರು ನೀಡಬೇಕು. ಮನಿಯಾರ್ಡರ್ ಅನ್ನು ಸ್ಥಗಿತಗೊಳಿಸಿ ವಿಚಾರಣೆಗೆ ಆದೇಶಿಸಲಾಗುತ್ತದೆ. ಪಾರ್ಸಲ್ ಕಳುಹಿಸಿದವರ ಬಗ್ಗೆಯೂ ವಿಚಾರಣೆ ನಡೆಸಿ ಹಣವನ್ನು ವಾಪಸ್ ಕೊಡಿಸಲು ಅವಕಾಶವಿದೆ ಎಂದು ಪ್ರಧಾನ ಅಂಚೆ ಕಚೇರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
No comments:
Post a Comment
Note: only a member of this blog may post a comment.