Pages

Wednesday 28 October 2015

ಶಾಲೆಗಳಿಗಿನ್ನು ಏಕರೂಪ ಹೆಸರು



GK4KPSC
 
ಬೆಂಗಳೂರು: ಥರಾವರಿ ಹೆಸರಿನಲ್ಲಿ ಶಾಲೆಗಳನ್ನು ಆರಂಭಿಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಅನುದಾನಿತ ಹಾಗೂ ಖಾಸಗಿ ಶಾಲೆಯ ಹೆಸರುಗಳಿಗೆ ಶೀಘ್ರದಲ್ಲೇ ಬ್ರೇಕ್ ಬೀಳಲಿದೆ.

ರಾಜ್ಯದಲ್ಲಿರುವ ಅನುದಾನಿತ ಮತ್ತು ಖಾಸಗಿ ಶಾಲೆಗಳು ಚಿತ್ರವಿಚಿತ್ರ ಹೆಸರಿಟ್ಟುಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದಲ್ಲದೆ, ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳು ಕೂಡ ಖಾಸಗಿ ಶಾಲೆ ಎಂದು ಸುಳ್ಳು ಹೇಳಿ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಎಲ್ಲ ವ್ಯವಹಾರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್​ಇಆರ್​ಟಿ) ಎಲ್ಲ ಶಾಲೆಗಳಿಗೆ ಏಕರೂಪದ ಹೆಸರಿಡಲು ಚಿಂತಿಸಿದೆ. ರಾಜ್ಯದಲ್ಲಿ ಸದ್ಯ 6,806 ಅನುದಾನಿತ ಹಾಗೂ 18,670 ಅನುದಾನರಹಿತ ಶಾಲೆಗಳಿವೆ.

ಏಕರೂಪ ಹೇಗೆ?: ರಾಜ್ಯದಲ್ಲಿ ರಾಷ್ಟ್ರೀಯ ಪಬ್ಲಿಕ್, ಅಂತಾರಾಷ್ಟ್ರೀಯ ಶಾಲೆ ಮೊದಲಾದ ಹೆಸರಿನಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಸರ್ಕಾರಿ ಶಾಲೆಗಳಿಗೆ ರೀತಿಯ ಯಾವುದೇ ವಿಭಿನ್ನ ಹೆಸರುಗಳಿಲ್ಲ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಎಂದಷ್ಟೇ ಕರೆಯಲಾಗುತ್ತದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿರುವ ಎಲ್ಲ ಅನುದಾನಿತ ಶಾಲೆಗಳು ಕೊನೆಯಲ್ಲಿ ಅನುದಾನಿತ ಅಥವಾ ಖಾಸಗಿ ಶಾಲೆ ಎಂಬ ಹೆಸರಿನಲ್ಲೇ ಮೂಡಿಬರಬೇಕು ಎಂಬುದು ಶಿಕ್ಷಣ ಇಲಾಖೆ ಚಿಂತನೆ.

ಸರ್ಕಾರಿ ಶಾಲೆಗಳು ಏಕರೂಪತೆ ಕಾಯ್ದುಕೊಂಡಿರುವಾಗ ಅನುದಾನಿತ ಅಥವಾ ಖಾಸಗಿ ಶಾಲೆಗಳೇಕೆ ಏಕರೂಪತೆ ಕಾಯ್ದುಕೊಳ್ಳಬಾರದು ಎಂಬ ಉದ್ದೇಶದಿಂದ ಡಿಎಸ್​ಇಆರ್​ಟಿ ಯೋಜನೆ ರೂಪಿಸುತ್ತಿದೆ.

ಕಡಿವಾಣ ಸಾಧ್ಯವೇ?

ಖಾಸಗಿ ಶಾಲೆಗಳು ಸರ್ಕಾರದಿಂದ ಯಾವುದೇ ಅನುದಾನ ಪಡೆಯದಿರುವುದರಿಂದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರೆ ಇವು ನಿಜವಾಗಿಯೂ ಪಾಲಿಸುತ್ತವೆಯೇ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ ಇನ್ನು ಮುಂದೆ ಖಾಸಗಿ ಶಾಲೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ತೆಗೆದುಕೊಳ್ಳುವ ನಿರಾಕ್ಷೇಪಣಾ ಪತ್ರ(ಎನ್​ಒಸಿ)ದಲ್ಲೇ ಏಕರೂಪದ ಹೆಸರಿಡುವ ಷರತ್ತು ವಿಧಿಸಲು ಡಿಎಸ್​ಇಆರ್​ಟಿ ಚಿಂತಿಸಿದೆ.

ಶಾಲೆಗಳು ಚಿತ್ರವಿಚಿತ್ರ ಹೆಸರಿಟ್ಟುಕೊಂಡಿರುವುದರಿಂದ ಸಾರ್ವಜನಿಕರಿಗೆ ಗೊಂದಲ ಉಂಟಾಗುತ್ತಿದೆ. ಇಂಥ ಗೊಂದಲ ನಿವಾರಣೆಗಾಗಿ ಏಕರೂಪ ಹೆಸರಿಡಲು ಚಿಂತಿಸಲಾಗಿದೆ.

| ಎಸ್.ಜಯಕುಮಾರ್ ನಿರ್ದೇಶಕ, ಡಿಎಸ್​ಇಆರ್​ಟಿ

 ತಗ್ಗಲಿದೆ ಬ್ಯಾಗ್ ಹೊರೆ

ಬೆಂಗಳೂರು: ಶಾಲಾ ಮಕ್ಕಳಿಗೊಂದು ಸಿಹಿ ಸುದ್ದಿ. ಶೀಘ್ರದಲ್ಲೇ ಶಾಲಾ ಬ್ಯಾಗ್​ಗಳ ಹೊರೆ ಕಡಿಮೆಯಾಗಲಿದೆ.

1ರಿಂದ 8ನೇ ತರಗತಿ ವರೆಗಿನ ಶಾಲಾಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡಲು ಮುಂದಾಗಿರುವ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ(ಡಿಎಸ್​ಇಆರ್​ಟಿ) ಸಾರ್ವಜನಿಕರು, ಪಾಲಕರು, ಶಿಕ್ಷಣತಜ್ಞರಿಂದ ಸಲಹೆ-ಸೂಚನೆ ಆಹ್ವಾನಿಸಿತ್ತು. ಸಲಹೆಗಳನ್ನಾಧರಿಸಿ ಶಿಕ್ಷಣ ಮತ್ತು ಮಕ್ಕಳ ತಜ್ಞರನ್ನೊಳಗೊಂಡ ನಾಲ್ವರು ಸದಸ್ಯರ 4 ತಂಡ ರಚಿಸಿದೆ. ತಂಡಗಳು ಶೀಘ್ರದಲ್ಲೇ ವಿವಿಧ ಮಾದರಿಯ ಶಾಲೆಗಳಿಗೆ ಭೇಟಿ ನೀಡಲಿವೆ.

ಏನು ಮಾಡಲಿದೆ?: ಡಿಎಸ್​ಇಆರ್​ಟಿ ಈಗಾಗಲೇ ಬೆಂಗಳೂರಿನಲ್ಲಿರುವ ಕೆಲವು ಸರ್ಕಾರಿ, ಅನುದಾನಿತ, ಖಾಸಗಿ, ಸಿಬಿಎಸ್​ಸಿ, ಐಸಿಎಸ್​ಇ, ಕೇಂದ್ರೀಯ ವಿದ್ಯಾಲಯ ಶಾಲೆಗಳನ್ನು ಗುರುತಿಸಿದೆ. ಪ್ರತಿ ತಂಡ ನಾಲ್ಕು ಶಾಲೆಗಳಿಗೆ ತೆರಳಿ ಅಲ್ಲಿ ಅನುಸರಿಸುತ್ತಿರುವ ಮಾರ್ಗಸೂಚಿಗಳನ್ನು ಪಟ್ಟಿ ಮಾಡಲಿದೆ. ಎಲ್ಲ ತಂಡಗಳು ನೀಡುವ ವರದಿ ಆಧರಿಸಿ ಡಿಎಸ್​ಇಆರ್​ಟಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ವಿದ್ಯಾರ್ಥಿಗಳ ಬ್ಯಾಗ್ ಹೊರೆ ಕಡಿಮೆ ಮಾಡುವಂತೆ ಕೇಂದ್ರದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ, ಕೇಂದ್ರೀಯ ಶೈಕ್ಷಣಿಕ ಸಲಹಾ ಸಮಿತಿ (ಎಂಎಚ್​ಆರ್​ಡಿ) ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಹಿನ್ನೆಲೆಯಲ್ಲಿ ಡಿಎಸ್​ಇಆರ್​ಟಿ ಕಾರ್ಯಪ್ರವೃತ್ತವಾಗಿದೆ. 4ನೇ ತರಗತಿ ಮಕ್ಕಳು 8-10 ಕೆ.ಜಿ., 4ನೇ ತರಗತಿ ನಂತರದ ವಿದ್ಯಾರ್ಥಿಗಳು 10-15 ಕೆ.ಜಿ.ತೂಕದ ಬ್ಯಾಗ್​ಗಳನ್ನು ಹೊತ್ತು ಶಾಲೆಗೆ ತೆರಳುತ್ತಿದ್ದಾರೆ. ವೈಜ್ಞಾನಿಕವಾಗಿ ವಿದ್ಯಾರ್ಥಿಯ ತೂಕದ ಶೇ.15 ಮಾತ್ರ ಶಾಲಾ ಬ್ಯಾಗ್ ಹೊರೆ ಇರಬೇಕಿದೆ ಎಂದು ವೈದ್ಯರು ಹೇಳುತ್ತಾರೆ.

ಪುಸ್ತಕಗಳ ಹೊರೆಯಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ. ಇದರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಕಾಳಜಿ ವಹಿಸುವುದು ಕಷ್ಟವಾಗುತ್ತಿದೆ. ಸಮಸ್ಯೆ ಬಗೆಹರಿಸಲು ನಾವು ವೈಜ್ಞಾನಿಕ ನೀತಿ ರೂಪಿಸಬೇಕಿದೆ.

| ನಿರಂಜನಾರಾಧ್ಯ ಸ್ಕೂಲ್ ಬ್ಯಾಗ್ ಹೊರೆ ಕಡಿಮೆ ಮಾಡುವ ತಂಡದ ಸದಸ್ಯ

ಸರ್ಕಾರಿ ಶಾಲೆಗಳಲ್ಲಿಲ್ಲ ಲ್ಯಾಬ್
ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಕಂಪ್ಯೂಟರ್ ಪ್ರಯೋಗಾಲಯಗಳೇ ಇಲ್ಲ. ಆದರೂ, ಇತರ ರಾಜ್ಯಕ್ಕೆ ಹೋಲಿಸಿಕೊಂಡರೆ ಕರ್ನಾಟಕ ಸುಸ್ಥಿತಿಯಲ್ಲಿದೆ.

ವಿಜ್ಞಾನ ವಿಷಯಕ್ಕೆ ಪ್ರತ್ಯೇಕ ಪ್ರಯೋಗಾಲಯ ಇರಬೇಕೆಂಬ ನಿಯಮವಿದೆ. ಬಹುತೇಕ ಸರ್ಕಾರಿ ಶಾಲೆಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ ಎಂಬುದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ(ಎಂಎಚ್​ಆರ್​ಡಿ) ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತಾತ್ಮಕ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆ (ಡೈಸ್) 2014-15 ವರದಿಯಿಂದ ಬಹಿರಂಗವಾಗಿದೆ.

ಭೌತಶಾಸ್ತ್ರದ ಪ್ರಾಯೋಗಿಕ ಅಧ್ಯಯನಕ್ಕೆ ಶೇ.67 ಶಾಲೆಯಲ್ಲಿ ಲ್ಯಾಬ್​ಗೆ ಪ್ರತ್ಯೇಕ ಕೊಠಡಿ ಇದೆ. ಶೇ.10 ಶಾಲೆಗಳಲ್ಲಿ ಲ್ಯಾಬ್ ಇದೆ. ಆದರೆ, ಪರಿಕರಗಳ ಕೊರತೆ ಹೆಚ್ಚಿದೆ. ಶೇ.18 ಶಾಲೆಗಳಲ್ಲಿ ಲ್ಯಾಬ್ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ.

ರಸಾಯನಶಾಸ್ತ್ರದ ಪ್ರಾಯೋಗಿಕ ಅಧ್ಯಯನಕ್ಕೆ ಶೇ.67.03 ಶಾಲೆಯಲ್ಲಿ ಸುವ್ಯವಸ್ಥಿತ ಲ್ಯಾಬ್ ಇದೆ. ಶೇ.9.05 ಶಾಲೆಯಲ್ಲಿ ಲ್ಯಾಬ್ ಇದ್ದರೂ, ಪರಿಕರಗಳಿಲ್ಲ. ಶೇ.17.89 ಶಾಲೆಯ ಲ್ಯಾಬ್​ಗಳು ಹೀನಾಯ ಸ್ಥಿತಿಯಲ್ಲಿವೆೆ. ಶೇ.33.42 ಶಾಲೆಗಳಲ್ಲಿ ಜೀವಶಾಸ್ತ್ರದ ಪ್ರಯೋಗಾಲಯ ಇಲ್ಲ. ಶೇ.35.41 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಇಲ್ಲ. ಶೇ.70.73 ಶಾಲೆಗಳಲ್ಲಿ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಲ್ಯಾಬ್ ಇರುವುದು ವಿಶೇಷ. ಭೌಗೋಳಿಕ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಶೇ.74.34 ಶಾಲೆಯಲ್ಲಿ ಉತ್ಕೃಷ್ಟ ಪ್ರಯೋಗಾಲಯವಿದೆ. ಶೇ.23.87 ಶಾಲೆಗಳಲ್ಲಿ ಗೃಹವಿಜ್ಞಾನದ ಪ್ರಯೋಗಾಲಯ ಕೊರತೆಯಿದೆ. ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಶೇ.77.16 ಶಾಲೆಗಳಲ್ಲಿ ಚೆನ್ನಾಗಿರುವ ಲ್ಯಾಬ್ ಇದೆ.

ಬೇರೆ ರಾಜ್ಯಗಳಲ್ಲಿ ಲ್ಯಾಬ್ ವ್ಯವಸ್ಥೆ ತೀರಾ ಹದಗೆಟ್ಟಿದೆ. ಕರ್ನಾಟಕ ಸೇರಿ ದೇಶದ ಶೇ.63.44 ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾತ್ರ ಉತ್ತಮವಾದ ಭೌತಶಾಸ್ತ್ರದ ಪ್ರಯೋಗಾಲಯ ಇದೆ. ಶೇ.63.57 ಶಾಲೆಯಲ್ಲಿ ಉತ್ತಮವಾದ ರಸಾಯನಶಾಸ್ತ್ರದ ಲ್ಯಾಬ್ ಹಾಗೂ ಶೇ.63.71 ಶಾಲೆಯಲ್ಲಿ ಜೀವಶಾಸ್ತ್ರದ ಲ್ಯಾಬ್ ಇದೆ. ಕಂಪ್ಯೂಟರ್, ಗೃಹವಿಜ್ಞಾನ, ಭಾಷಾ, ಭೌಗೋಳಿಕಶಾಸ್ತ್ರ ಹಾಗೂ ಮನೋವಿಜ್ಞಾನದ ಲ್ಯಾಬ್​ಗಳು ಶೇ.60 ಶಾಲೆಗಳಲ್ಲಿ ಚೆನ್ನಾಗಿವೆೆ.

 ಸರ್ಕಾರಿ ಶಾಲೆಗಳ ಲ್ಯಾಬ್ ವ್ಯವಸ್ಥೆಗೆ ಸಂಬಂಧಿಸಿದಂತೆ ವಿಜ್ಞಾನ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತದೆ. ರಾಜ್ಯದ ನಾಲ್ಕು ಶೈಕ್ಷಣಿಕ ವಿಭಾಗದಲ್ಲಿಯೂ ಇದರ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಇದೆ.

| ಕೆ.ಎಸ್.ಸತ್ಯಮೂರ್ತಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ


No comments:

Post a Comment

Note: only a member of this blog may post a comment.