Pages

Tuesday, 27 October 2015

ವಾಲ್ಮೀಕಿ


GK4KPSC

ಒಂದು ಊರನ್ನು ಭವ್ಯವಾಗಿ ಕಟ್ಟಿದ ಮಾತ್ರಕ್ಕೆ, ಸೈನ್ಯ ಸಿದ್ಧತೆ, ಅಪಾರ ಸಂಪತ್ತು, ಐಶ್ವರ್ಯ ಇದ್ದಮಾತ್ರಕ್ಕೆ ಜೀವನಕ್ರಮ ಬಹುಕಾಲ ಉಳಿಯಲಾರದೆಂದೂ ಅದಕ್ಕೆ ಸತ್ಯ, ತ್ಯಾಗ, ಧರ್ಮ, ಅಧ್ಯಾತ್ಮದ ಚೌಕಟ್ಟು ಬೇಕೆಂದೂ ಕವಿ ವಾಲ್ಮೀಕಿ ಅಯೋಧ್ಯಾ, ಲಂಕಾ ಮತ್ತು ಕಿಷ್ಕಿಂಧಾ ಸಂಸ್ಕೃತಿಗಳ ತುಲನೆಯ ಮೂಲಕ ಹೃದ್ಯವಾಗಿ ತಿಳಿಸಿಕೊಟ್ಟಿದ್ದಾನೆ.
.ನಾ.ಭಟ್ಟ
ಜಗತ್ತಿನ ಆದಿಕಾವ್ಯ ರಾಮಾಯಣ. ಇದನ್ನು ಬರೆದವನು ಆದಿಕವಿ ವಾಲ್ಮೀಕಿ. ಒಂದು ಕಾಲಘಟ್ಟದಲ್ಲಿ ಜನಪ್ರಿಯವಾದ, ಜನರ ಆಡುಭಾಷೆಯಲ್ಲಿ ಇದ್ದ, ಜನಸಾಮಾನ್ಯರ ಮಧ್ಯದಲ್ಲಿ ಹೊರಹೊಮ್ಮಿದ ಒಂದು ಕಾವ್ಯವನ್ನು ವಾಲ್ಮೀಕಿಗಿಂತ ಮೊದಲು ಒಂದು ನಿರ್ದಿಷ್ಟ ಛಂದಸ್ಸಿನಲ್ಲಿ ಯಾರೂ ಬರೆದಿರಲಿಲ್ಲವಾಗಿತ್ತು. ಅದನ್ನು ವಾಲ್ಮೀಕಿ ಬರೆದ ಎಂಬ ಕಾರಣಕ್ಕೆ ಅವನನ್ನು ಆದಿಕವಿಯೆಂದು ಕರೆಯುತ್ತಾರೆ. ರಾಮಾಯಣದ ಬಹುಪಾಲು ಶ್ಲೋಕಗಳು ಅನುಷ್ಟುಪ್ ಛಂದಸ್ಸಿನಲ್ಲಿ ಇವೆ.
ಭರತಖಂಡದ ಜನಕ್ಕೆ ಅವರ ಜೀವನಯಾತ್ರೆಯಲ್ಲಿ ಮಾರ್ಗಜ್ಯೋತಿಯಾಗಿ ನಿಂತಿರುವ ಅನುಪಮ ಕಾವ್ಯವನ್ನು ನೀಡಿದ ವಾಲ್ಮೀಕಿ ತನ್ನ ಬಗ್ಗೆ ತಾನು ಹೆಚ್ಚಿಗೆ ಏನೂ ಹೇಳಿಕೊಳ್ಳುವುದೇ ಇಲ್ಲ. ‘ಪ್ರಚೇತಸೋಹಂ ದಶಮಃ ಪುತ್ರೋ ರಾಘವನಂದನ|’-‘ಹೇ ಶ್ರೀರಾಮ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ನಾನೆಂದೂ ಸುಳ್ಳಾಡಿದವನಲ್ಲ. ಈಕೆ ಪರಿಶುದ್ಧೆ! ಸ್ವೀಕರಿಸು’. ತನ್ನ ಆಶ್ರಮದಲ್ಲಿದ್ದು ಲವಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ರಾಮನೆದುರು ನಿಲ್ಲಿಸಿ ಅವಳನ್ನು ಸ್ವೀಕರಿಸು ಎಂದು ಹೇಳುವ ಸಂದರ್ಭದಲ್ಲಿ ತನ್ನ ಕುಲಗೋತ್ರ, ತಂದೆ ಮುಂತಾದವರನ್ನು ಸ್ಮರಿಸಿ ಹೇಳುವಾಗ ಹೇಳಿದ ಮಾತಿದು. ಹಾಗೆಯೇ ಮತ್ತೊಂದು ಸಂದರ್ಭ: ಲವಕುಶರು ತನ್ನೆದುರು ರಾಮಾಯಣದ ಕಥೆಯನ್ನು ಗಾನರೂಪದಲ್ಲಿ ಹಾಡುವಾಗ ಇದನ್ನು ಬರೆದವರು ಯಾರು?’ ಎಂದು ರಾಮ ಪ್ರಶ್ನಿಸಿದಾಗ ಲವಕುಶರು ಇದನ್ನು ಬರೆದವ ವಾಲ್ಮೀಕಿ. ಅವನು ಭಾರ್ಗವ ಗೋತ್ರದ ಮಹರ್ಷಿ’ ಎಂದು ಹೇಳುತ್ತಾರೆ.
ಇಂತಹ ಮಹರ್ಷಿ ರಾಮಾಯಣದ ಸಮಕಾಲೀನ ವ್ಯಕ್ತಿಯಾಗಿದ್ದ. ವಾಲ್ಮೀಕಿ ಕೇವಲ ತಾಪಸನಿರಲಿಲ್ಲ. ಕಾಳಿದಾಸ, ಭವಭೂತಿ, ಬಾಣ, ಭಾಸರಂತೆ ವರ್ಗೀಕೃತನಾಗದೇ ವ್ಯಾಸವರ್ಗಕ್ಕೆ ಸೇರಿದ ಒಬ್ಬನೇ ಮಹಾಕವಿ ಈತ. ತಮಸಾ ನದಿಯ ತೀರದಲ್ಲಿ ಆತ ಕುಲಪತಿಯಾಗಿ ವಿದ್ಯಾಕೇಂದ್ರವೊಂದರ ಮಾರ್ಗದರ್ಶಕನಾಗಿದ್ದ. ಅಧ್ಯಾತ್ಮ ವಿದ್ಯೆ, ಅದರ ಅಂಗಗಳಾದ ವೇದ, ಉಪನಿಷತ್ತುಗಳು, ಲೋಕೋಪಯುಕ್ತವಾದ ಶಿಲ್ಪ, ಗಾಂಧರ್ವ, ಚಿತ್ರಕಲೆ, ನಾಟ್ಯ, ಧನುರ್ವೆದ ಮುಂತಾದ ವಿದ್ಯೆಗಳಿಗೆ ಅದು ಒಂದು ದಿವ್ಯ ತಾಣವಾಗಿತ್ತು. ಸಾವಿರಾರು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅಲ್ಲಿದ್ದರು. ಇಂತಹ ಆಶ್ರಮಕ್ಕೆ ದಶರಥ ಚಕ್ರವರ್ತಿಯೂ ತನ್ನ ಮಕ್ಕಳಾದ ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನರೊಂದಿಗೆ ಆಗಾಗ ಬಂದು ಮುನಿದರ್ಶನ ಮಾಡಿಕೊಂಡು ಹೋಗುತ್ತಿದ್ದ.
ಇಂತಹ ಮುನಿ, ಮಹಾಕವಿ ವಾಲ್ಮೀಕಿಯೆಂಬ ಹೆಸರು ಪಡೆದದ್ದೇ ಒಂದು ಪವಾಡಸದೃಶ ಕಥೆ. ವಾಲ್ಮೀಕಿ ಆಗಿನ್ನೂ ಶಿಶುವಾಗಿರುವಾಗ ಒಮ್ಮೆ ಆಕಸ್ಮಿಕವಾಗಿ ತನ್ನ ತಾಯಿಯಿಂದ ಬೇರ್ಪಟ್ಟು, ಬೇಡರ ಕೈಗೆ ಸಿಕ್ಕು ಮುಂದೆ ದೊಡ್ಡ ದರೋಡೆಕೋರನಾಗುತ್ತಾನೆ. ಹಾಗೆ ಕೊಲೆ-ಸುಲಿಗೆ ಮಾಡುತ್ತಿರುವ ಒಂದು ಸಂದರ್ಭದಲ್ಲಿ ಅದೇ ಮಾರ್ಗವಾಗಿ ಮಹರ್ಷಿ ನಾರದರು ಬರುತ್ತಿರುತ್ತಾರೆ. ಅವರನ್ನೇ ಅಡ್ಡಯಿಸಿ ಆದರೆ ಅವರನ್ನು ಥಳಿಸಲಾಗದೇ ಅವರ ತಪಸ್ಸು, ವೇದಾಧ್ಯಯನ, ವಿದ್ಯೆ ಹಾಗೂ ಭಾವೋನ್ನತಿಕಾರಕವಾದ ಮಾತುಗಳಿಂದ ಪ್ರಭಾವಿತನಾಗಿ ಅವರಿಂದಲೇ ರಾಮ ಮಂತ್ರ ದೀಕ್ಷಿತನಾಗಿ, ಪರಿವರ್ತಿತನಾಗಿ ತಪಸ್ಸು ಮಾಡಲು ತೊಡಗುತ್ತಾನೆ. ಬಹು ದೀರ್ಘಕಾಲ ತಪಸ್ಸುಗೈದು ತ್ರೇತಾಯುಗದ ಅಂತ್ಯದಲ್ಲಿ ಅವನು ಕುಳಿತಕಡೆಗೇ ದೊಡ್ಡ ಹುತ್ತ ಬೆಳೆದು ಅವನ ಚರ್ಮ, ಮಾಂಸ, ರಕ್ತಗಳನ್ನೆಲ್ಲಾ ಗೆದ್ದಲು ಹುಳುಗಳು ತಿಂದುಹಾಕಿ ಆತ ಬರೀ ಅಸ್ಥಿಪಂಜರದ ವ್ಯಕ್ತಿಯಾಗಿ ರಾಮ ಮಂತ್ರ ಮಹಿಮೆಯಿಂದ ಕೇವಲ ಮೂಳೆಗಳಿಂದಲೇ ಉಸಿರಾಡುತ್ತಿದ್ದ. ನಾರದರು ಪುನಃ ಬಂದು ಅವನನ್ನು ಎಚ್ಚರಿಸುವಾಗ ತಪಸ್ವಿ ಹೊಸ ಶರೀರ, ಮನಸ್ಸು, ಬುದ್ಧಿ, ಹೊಸ ಪ್ರಜ್ಞೆ, ಹೊಸ ದಿಕ್ಕು ಪಡೆಯುವ ಹೊಸ್ತಿಲಲ್ಲಿ ಇದ್ದ. ನಾರದರ ಸನ್ನಿಧಿಯಲ್ಲೇ ಮಳೆ ಆರಂಭವಾಗಿ ಹುತ್ತವೆಲ್ಲ ಕರಗಿ ಮುನಿಶ್ರೇಷ್ಠ ರಾಮ ಮಂತ್ರ ಮಹಿಮೆಯಿಂದ ಹೊಸ ಶರೀರಿಯಾಗಿ, ಹೊಸ ವ್ಯಕ್ತಿಯಾಗಿ ಬಾಳತೊಡಗುತ್ತಾನೆ. ವಲ್ಮೀಕದಿಂದ ಹುಟ್ಟಿಬಂದದ್ದರಿಂದ, ಅದರ ದೆಸೆಯಿಂದಾಗಿ ವಾಲ್ಮೀಕಿ ಎಂಬ ಹೆಸರು ಪಡೆದು ಲೋಕವಿಖ್ಯಾತನಾಗುತ್ತಾನೆ.
ರಾಮಾಯಣವನ್ನು ಮುಖ್ಯವಾಗಿ ಎರಡು ದೃಷ್ಟಿಯಿಂದ ನೋಡಬಹುದು.
ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ|
ವೇದಃ ಪ್ರಾಚೇತಸಾದಾಸೀತ್ ಸಾಕ್ಷಾದ್ರಾಮಾಯಣಾತ್ಮನಾ||
ಎಂಬ ಶ್ಲೋಕವೇ ಎರಡು ದೃಷ್ಟಿಯನ್ನು ಹೇಳುವ ಆಧಾರಶ್ರುತಿ. ಮೊದಲನೆಯ ದೃಷ್ಟಿ- ‘ಮಹಾವಿಷ್ಣುವೇ ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದ. ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು’. ಎರಡನೆಯ ದೃಷ್ಟಿ- ‘ಶ್ರೀರಾಮನು ಮನುಷ್ಯನಾಗಿ ಹುಟ್ಟಿ ಮಹಾವಿಷ್ಣು ಪದವಿಗೆ ಏರಿದನು. ತದನುಸಾರವಾಗಿ ವಾಲ್ಮೀಕಿಪ್ರಣೀತ ರಾಮಾಯಣವು ವೇದಪ್ರಾಯವಾಯಿತು’.
ರಾಮಾಯಣವನ್ನು ಪವಿತ್ರಗ್ರಂಥವೆಂದೂ, ಧಾರ್ವಿುಕಗ್ರಂಥವೆಂದೂ ಪೂಜಿಸುವವರಿಗೆ, ನಾಮಸ್ಮರಣೆ, ನಾಮಸಂಕೀರ್ತನೆ, ಪಾರಾಯಣ ಮಾಡುವವರಿಗೆ, ಶುಕಪಠಿತ ಪದ್ಧತಿಯವರಿಗೆ ಮೊದಲನೆಯ ದೃಷ್ಟಿ ಆಪ್ಯಾಯಮಾನವಾಗಿರುತ್ತದೆ. ಇದರಲ್ಲಿ ಅನುಗ್ರಹಾಪೇಕ್ಷೆಯ ದೃಷ್ಟಿ ಮುಖ್ಯವಾಗಿದೆ. ರಾಮನು ಭಗವಂತನ ಪ್ರತ್ಯಕ್ಷಮೂರ್ತಿ. ಆತ ಕೃಪಾಳು. ಅವನ ಭಕ್ತಿಯು ಪರಮ ಶ್ರೇಯಸ್ಸಾಧಕ. ಇದು ಅವರ ದೃಷ್ಟಿ.
ಎರಡನೆಯ ದೃಷ್ಟಿಯು ಮನುಷ್ಯಸಹಜ ಪ್ರಯತ್ನ ವನ್ನೂ, ಪೌರುಷ ಪ್ರಕಾಶವನ್ನೂ ಹೇಳುತ್ತದೆ. ರಾಮನು ಮಾನುಷ ಸತ್ತ್ವಕ್ಕೆ ಆದರ್ಶಮೂರ್ತಿ. ಭಗವದವತಾರವಾದರೂ ಮನುಷ್ಯಬೋಧೆಗಾಗಿ ಆದ ಅವತಾರ. ಮನುಷ್ಯನು ಹೇಗೆ ಆತ್ಮಸಂಯಮದಿಂದ, ಆತ್ಮಪರೀಕ್ಷಣದಿಂದ, ಆತ್ಮಶಿಕ್ಷಣದಿಂದ, ಆತ್ಮಪ್ರಯತ್ನ ದಿಂದ, ಆತ್ಮಶೌರ್ಯದಿಂದ ಲೋಕ ಜೀವನದ ಕಷ್ಟಪರೀಕ್ಷೆಗಳಿಂದ ಪಾರಾಗಿ ಪರಮ ಪದವಿಗೇರಬಹುದು ಎಂಬುದನ್ನು ಸುಂದರವಾಗಿ ನಿರೂಪಿಸುತ್ತದೆ. ತನ್ನಿಂದ ತಾನೇ ಉದ್ಧಾರವಾಗಬೇಕು ಅನ್ನುವುದು ರಾಮನ ಆದರ್ಶ. ಅದಕ್ಕೆ ಇಲ್ಲಿ ಪಾಠವಿದೆ. ಇದು ಎರಡನೆಯವರ ದೃಷ್ಟಿ. ದೃಷ್ಟಿಯಲ್ಲಿ- ರಾಮಾಯಣ ಒಂದು ಧಾರ್ವಿುಕ, ಆಧ್ಯಾತ್ಮಿಕ ಗ್ರಂಥ. ಅದನ್ನು ಗೌರವಿಸಿ ಪೂಜಿಸಬೇಕು; ಆರಾಧಿಸಬೇಕು ಎಂಬುದಕ್ಕಿಂತ ಮಹಾ ಕಾವ್ಯವೊಂದನ್ನು ಹೇಗೆ ಓದಬೇಕು? ಧರ್ವಧರ್ಮ ಸಂಘರ್ಷವನ್ನು ಕವಿ ಹೇಗೆ ಚಿತ್ರಿಸಿದ್ದಾನೆ? ಕಥಾ ಸಂವಿಧಾನ, ಪಾತ್ರಗಳ ಹೆಣಿಗೆ, ರಸಪೋಷಣೆ ಎಂಬಿತ್ಯಾದಿ ಕಾವ್ಯಮೀಮಾಂಸಾ ವಿಷಯಗಳಿಗೇ ಆದ್ಯತೆ ಹೆಚ್ಚು.
ವಾಲ್ಮೀಕಿ ಮಹರ್ಷಿ ತನ್ನ ಕೃತಿಯಲ್ಲಿ ಮುಖ್ಯವಾಗಿ ನಮಗೆ ಮೂರು ಸಂಸ್ಕೃತಿಗಳ ಪರಿಚಯ ಮಾಡಿಕೊಡುತ್ತಾನೆ: ಅಯೋಧ್ಯಾ ಸಂಸ್ಕೃತಿ, ಲಂಕಾ ಸಂಸ್ಕೃತಿ ಮತ್ತು ಕಿಷ್ಕಿಂಧಾ ಸಂಸ್ಕೃತಿ. ಕವಿ ಅಯೋಧ್ಯಾ ಸಂಸ್ಕೃತಿಯನ್ನು ಜಾಬಾಲಿ ಮಹರ್ಷಿಗಳ ಮಾತುಗಳಲ್ಲಿ ಹಿಡಿದುಕೊಟ್ಟಿದ್ದಾನೆ.
ಯಜಸ್ವ ದೇಹಿ ದೀಕ್ಷಸ್ವ ತಪಸ್ತಪ್ಯಸ್ವ ಸಂತ್ಯಜ|
ದೇವತೆಗಳನ್ನು ಆರಾಧಿಸು; ಯಜ್ಞ ಮಾಡು- ಆತ್ಮಾರ್ಪಣೆ ಮಾಡು. ದಾನ ಮಾಡು. ದೀಕ್ಷೆ ಹಿಡಿ-ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಕಟಿಬದ್ಧನಾಗು. ತಪಸ್ಸು ಮಾಡು. ತ್ಯಾಗ ಮಾಡು’- ಭರತನು ರಾಮನನ್ನು ಅಯೋಧ್ಯೆಗೆ ಮರಳಿ ಕರೆದುಕೊಂಡು ಹೋಗಲು ಬಂದಾಗ ಭರತನ ವಾದವನ್ನು ಸಮರ್ಥಿಸಿ ಜಾಬಾಲಿ ಹೇಳಿದ ವಾಕ್ಯ ಇದು. ಇದು ಅಯೋಧ್ಯಾ ಕಾಂಡದ 108ನೇ ಸರ್ಗದ 16ನೇ ಶ್ಲೋಕದಲ್ಲಿ ಬರುತ್ತದೆ. ವಾಕ್ಯದಲ್ಲಿ ಮನುಷ್ಯನಾಗಿ ಹುಟ್ಟಿ ಬಂದವನು ಹೇಗೆ ಬಾಳಬೇಕೆಂಬುದಕ್ಕೆ ಮಾರ್ಗದರ್ಶನವಿದೆ.
ರಾಮನಂತೂ ತ್ಯಾಗದಿಂದಲೇ ಅಮೃತ ಪದವಿ’ ಎಂಬ ವೇದದರ್ಶನವನ್ನು ಸಾಕಾರಗೊಳಿಸಿದ್ದ. ‘ನಾನು ದ್ರವ್ಯಾರ್ಜನಪರನಲ್ಲ. ನನ್ನನ್ನು ಋಷಿಗೆ ಸಮಾನವೆಂದು ತಿಳಿ. ನನಗೆ ಧರ್ಮವೇ ಮುಖ್ಯ’ ಎಂದು ರಾಮನು ಕೇಕೇಯಿಗೆ ತನ್ನನ್ನು ಪರಿಚಯಿಸಿಕೊಳ್ಳುವಾಗ ಹೇಳಿದ ಮಾತು ಅಯೋಧ್ಯಾ ಸಂಸ್ಕೃತಿಯ ತಿರುಳು. ಇದಕ್ಕೆ ವಿರುದ್ಧವಾದುದೇ ಲಂಕಾ ಸಂಸ್ಕೃತಿ.
ಪಿಬ ವಿಹರ ರಮಸ್ವ ಭುಂಕ್ಷ್ವ ಭೋಗಾನ್| (ಸುಂದರ ಕಾಂಡ 20-35)
ಚೆನ್ನಾಗಿ ಕುಡಿ (ಯಾವುದು ಎಂದು ಬೇರೆ ಹೇಳಬೇಕಾಗಿಲ್ಲ ಅಲ್ಲವೆ?), ಬೇಕಾದಷ್ಟು ವಿಹರಿಸು. ರಮಿಸು. ಬೇಕಾದ ಭೋಗಗಳನ್ನೆಲ್ಲಾ ಅನುಭವಿಸು’. ಇದು ರಾವಣನ ಧ್ಯೇಯವಾಕ್ಯವೂ ಆದರ್ಶವೂ ಆಗಿತ್ತು. ಲಂಕೆಯಲ್ಲಿ ಸೌಂದರ್ಯಪ್ರಜ್ಞೆ, ಭೂಷಣಪ್ರಿಯತೆ, ಸೌಧಗಳು, ದೊಡ್ಡ ದೊಡ್ಡ ಕೋಟೆಕೊತ್ತಳಗಳು ಇದ್ದವು. ಐಶ್ವರ್ಯ, ಸಂಪತ್ತುಗಳು ಇದ್ದವು. ಇವುಗಳ ಜತೆಗೆ ಅವಶ್ಯ ಇರಬೇಕಾಗಿದ್ದ ಧರ್ಮ, ಸತ್ಯ, ತ್ಯಾಗಗಳಂತಹ ಮೌಲ್ಯಗಳೇ ಇರಲಿಲ್ಲವಾಗಿತ್ತು. ಅವುಗಳ ಕೊರತೆಯೇ ಅವರನ್ನು ಬಲಿತೆಗೆದುಕೊಂಡಿತು.
ಇನ್ನು ಕಿಷ್ಕಿಂಧಾ ಸಂಸ್ಕೃತಿ. ಅಲ್ಲಿಯ ವಾನರರು ನರರೂ ಅಲ್ಲದ ರಾಕ್ಷಸರೂ ಅಲ್ಲದ ಒಂದು ಎಡವಟ್ಟಾದ ಜೀವನ ಕ್ರಮವನ್ನು ಅನುಸರಿಸುತ್ತಿದ್ದರು. ವೈದಿಕಜೀವನ ಕ್ರಮವನ್ನು ಅಳವಡಿಸಿಕೊಂಡಿದ್ದರೂ ಸ್ತ್ರೀಚಾಪಲ್ಯ, ಚಂಚಲಮನಸ್ಕತೆ, ಮದ್ಯಪಾನಾಸಕ್ತಿ ವಿಪರೀತವಾಗಿದ್ದವು. ಆಂಜನೇಯ ಒಬ್ಬನನ್ನು ಹೊರತುಪಡಿಸಿದರೆ ಉಳಿದವರು ಯಾರೂ ಅಂತಹ ಶೀಲ, ಚಾರಿತ್ರ್ಯಳನ್ನು ಹೊಂದಿರಲಿಲ್ಲವಾಗಿತ್ತು.
ಒಂದು ಊರನ್ನು ಭವ್ಯವಾಗಿ ಕಟ್ಟಿದ ಮಾತ್ರಕ್ಕೆ, ಎಲ್ಲ ಸೌಕರ್ಯಗಳನ್ನು
ಒದಗಿಸಿದ ಮಾತ್ರಕ್ಕೆ, ಸೈನ್ಯ ಸಿದ್ಧತೆ, ಅಸ್ತ್ರ ಶಸ್ತ್ರ ಕುಶಲತೆ, ಅಪಾರ ಸಂಪತ್ತು, ಐಶ್ವರ್ಯ ಇದ್ದಮಾತ್ರಕ್ಕೆ ಊರಿನ ಜೀವನಕ್ರಮ ಬಹುಕಾಲ ಉಳಿಯಲಾರದೆಂದೂ ಅದಕ್ಕೆ ಸತ್ಯ, ತ್ಯಾಗ, ಧರ್ಮ, ಅಧ್ಯಾತ್ಮದ ಚೌಕಟ್ಟು ಇದ್ದರೆ ಮಾತ್ರ ಅಲ್ಲಿಯ ಸಂಸ್ಕೃತಿ, ಜೀವನಕ್ರಮ ಶಾಶ್ವತವಾಗಿ ಉಳಿಯುವುದೆಂದೂ ಕವಿ ವಾಲ್ಮೀಕಿ ಅಯೋಧ್ಯಾ, ಲಂಕಾ ಮತ್ತು ಕಿಷ್ಕಿಂಧಾ ಸಂಸ್ಕೃತಿಗಳ ತುಲನೆಯ ಮೂಲಕ ಬಹು ಹೃದ್ಯವಾಗಿ ತಿಳಿಸಿಕೊಟ್ಟಿದ್ದಾನೆ.

No comments:

Post a Comment

Note: only a member of this blog may post a comment.